ಪತಿ-ಪತ್ನಿ ಸರಿಸಮಾನರು: ಗುರುಸಿದ್ಧ ಶ್ರೀ
ಮುಂಡರಗಿ ಅನ್ನದಾನೀಶ್ವರ ಜಾತ್ರಾಮಹೋತ್ಸವದಲ್ಲಿ ಸಾಮೂಹಿಕ ವಿವಾಹ
ಕನ್ನಡಪ್ರಭ ವಾರ್ತೆ, ಮುಂಡರಗಿ, ಫೆ. 23
ಗಂಡ- ಹೆಂಡತಿ ಪರಸ್ಪರ ಗೌರವದಿಂದ ಜೀವನ ನಡೆಸಬೇಕು. ನಾ ಹೆಚ್ಚು-ನೀ ಹೆಚ್ಚು ಅನ್ನುವ ಅಹಂ ಬೆಳೆಸಿಕೊಳ್ಳದೆ ಇಬ್ಬರೂ ಸರಿಸಮಾನರು ಎನ್ನುವ ಭಾವದಿಂದ ಬದುಕುವುದನ್ನು ಕಲಿಯಬೇಕು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಶನಿವಾರ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ ಜಾತ್ರಾಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಸಂಸ್ಕಾರ, ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವುದರೊಂದಿಗೆ ಕುಟುಂಬಕ್ಕೆ ಒಂದೇ ಮಗು ಸಾಕು ಎನ್ನುವ ತೀರ್ಮಾನಕ್ಕೆ ಬನ್ನಿರಿ ಎಂದರು.
ನಾಡೋಜ, ಜ.ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾದ ನವದಂಪತಿಗಳು ತಮ್ಮ ಕುಟುಂಬಕ್ಕೆ ಹೆಣ್ಣಾಗಲಿ-ಗಂಡಾಗಲಿ ಒಂದೇ ಮಗುವನ್ನು ಪಡೆದುಕೊಂಡು, ಆ ಮಗುವಿಗೆ ಒಂದು ವನವನ್ನು ನಿರ್ಮಿಸುವ ಕೆಲಸಮಾಡಿ ಪರಿಸರ ಸಂರಕ್ಷಣೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಕಪ್ಪತಗುಡ್ಡದ ಸುತ್ತಲೂ ಇರುವ ಜನರು ಕಪ್ಪತಗುಡ್ಡದ ಸಂರಕ್ಷಣೆಗೆ ಮುಂದಾಗಬೇಕು. ಅಲ್ಲಿ ನಡೆಯುವಂತಹ ಯಾವುದೇ ಗಣಿಗಾರಿಕೆಯನ್ನು ಸರ್ಕಾರ ಕೂಡಲೇ ನಿಲ್ಲಿಸಿ ಗುಡ್ಡದ ಸಂರಕ್ಷಣೆಗೆ ಮುಂದಾಗಬೇಕು. ಪೋಸ್ಕೋ ಬರದಂತೆ ನೋಡಿಕೊಂಡ ಸರ್ಕಾರ ಅತ್ತಿಕಟ್ಟಿ ಸಮೀಪ ನಡೆಯುವ ರಾಮಗಡ ಮಿನರಲ್ಸ್ನ ಗಣಿಗಾರಿಕೆ ನಿಲ್ಲಿಸುವಂತೆ ಕ್ರಮ ಜರುಗಿಸಬೇಕು ಎಂದರು.
ಅತಿಥಿಯಾಗಿ ಶಾಸಕ ರಾಮಣ್ಣ ಲಮಾಣಿ, ಶಿವಕುಮಾರಸ್ವಾಮಿಗಳು ಮಾತನಾಡಿದರು. ಈ ಸಂದರ್ಭದಲ್ಲಿ 38 ಜೋಡಿಗಳು ನವದಂಪತಿಗಳಾದರು. ಕಾರ್ಯಕ್ರಮದಲ್ಲಿ ಶ್ರೀಮಠದ ನಿಯೋಜಿನ ಸ್ವಾಮಿಗಳಾದ ಮಲ್ಲಿಕಾರ್ಜುನ ಸ್ವಾಮಿಗಳು, ಶಿವಯೋಗೀಶ್ವರ ಮಹಾಸ್ವಾಮಿಗಳು, ಪ್ರಭುಲಿಂಗ ದೇವರು, ವೀರೇಶ್ವರ ದೇವರು, ವೀರೇಶ ಶಿವಾಚಾರ್ಯರು, ಲಿಂಗನಾಯಕನ ಹಳ್ಳಿಯ ಚನ್ನವೀರ ಮಹಾಸ್ವಾಮಿಗಳು, ಕುಮಾರ ಮಹಾಸ್ವಾಮಿಗಳು, ಚನ್ನಬಸವ ಮಹಾಸ್ವಾಮಿಗಳು, ತುಮಕೂರು ಬೆಟ್ಟದಳ್ಳಿಯ ಚಂದ್ರಶೇಖರ ಸ್ವಾಮಿಗಳು, ಪ್ರಭುಲಿಂಗದೇವರು, ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಜಾತ್ರಾ ಕಮಿಟಿಯ ಅಧ್ಯಕ್ಷ ಮಂಜುನಾಥ ಗೋಡಿ, ಪ್ರದೀಪ ಗುಡದಪ್ಪನವರ, ವಿ.ಎಸ್.ಘಟ್ಟಿ, ರವಿಶಂಕರ ಹೆಬ್ಬಾಳ, ದೇವು ಹಡಪದ, ನಾಗರಾಜ ಗುಡಿಮನಿ, ಶಂಕ್ರಪ್ಪ ಬಾರಿಕಾಯಿ, ನಾಗಪ್ಪ ಹಾಲಗಿ, ವಿ.ಎಸ್.ಚವಡಿ, ಪ್ರೊ. ಎನ್.ಎಫ್.ಅಕ್ಕೂರ, ಪ್ರೊ. ಸಿ.ಎಸ್. ಅರಸನಾಳ, ಪ್ರೊ. ವಿ.ಕೆ. ಕೋಳೋರಮಠ ಮತ್ತು ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅಕ್ಕನಬಳಗದವರಿಂದ ಮಂತ್ರ ಘೋಷ್ ಕಾರ್ಯಕ್ರಮ ನಡೆಯಿತು. ಪ್ರೊ. ಎ.ವೈ.ನವಲಗುಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.