ಮಾನಸಿಕ ಅಸ್ವಸ್ಥನಿಂದ ಹಲ್ಲೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 23
ಒರಿಸ್ಸಾ ಮೂಲದ ಮಾನಸಿಕ ಅಸ್ವಸ್ಥನೊಬ್ಬ ಪಟ್ಟಣದ ಶಿಗ್ಲಿ ಕ್ರಾಸ್ನ ಉಮಾ ವಿದ್ಯಾಲಯದ ಹತ್ತಿರ ಶನಿವಾರ ಬೆಳಗಿನ ಜಾವ ಸಾರ್ವಜನಿಕರ ಮೇಲೆ ದೊಣ್ಣೆಯಿಂದ ದಾಳಿ ಮಾಡಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಪಟ್ಟಣದ ನಿವಾಸಿ ಬಸನಗೌಡ ಮದ್ನೂರ (38) ಹಾಗೂ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸೋಮಪ್ಪ ದೊಡ್ಡಮನಿ (52) ಎಂಬುವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ಕಳಿಸಲಾಗಿದೆ.
ಕಾಶಿನಾಥ ಎಂದು ಹೇಳಿಕೊಳ್ಳುವ ಈ ವ್ಯಕ್ತಿ ಶನಿವಾರ ಬೆಳಗಿನ ಜಾವ ಸುಖಾಸುಮ್ಮನೆ ಆರು ಅಡಿ ಉದ್ದದ ಬಿದಿರಿನ ಬೊಂಬು ಹಿಡಿದು ಬೀಸಿದ್ದಾನೆ. ಮೊದಲ ಹೊಡೆದ ಹವಾಲ್ದಾರ್ ಸೋಮಪ್ಪ ಅವರಿಗೆ ಬಿದ್ದಿದೆ. ಅವರನ್ನು ರಕ್ಷಿಸಲು ಹೋದ ಬಸನಗೌಡ ಅವರ ತಲೆಗೂ ಬಲವಾದ ಪೆಟ್ಟು ಬಿದ್ದಿದೆ. ಹವಾಲ್ದಾರ್ ತಲೆಗೆ 19 ಹೊಲಿಗೆ ಹಾಕಲಾಗಿದೆ. ಅವರ ಕೈಗೂ ಏಟು ಬಿದ್ದಿದೆ. ಬಳಿಕ ಯುವಕರು ಮಾನಸಿಕ ಅಸ್ವಸ್ಥನನ್ನು ಹಿಡಿದು ಚೆನ್ನಾಗಿ ಹೊಡೆದು, ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಒರಿಯಾ ಭಾಷೆಯನ್ನು ಮಾತ್ರ ಬಲ್ಲ ಈತ ಅಲ್ಪಸ್ವಲ್ಪ ಹಿಂದಿ ಮಾತನಾಡುತ್ತಾನೆ. ಈಗ ಆತನ ಬಗ್ಗೆ ಸಂಪೂರ್ಣ ಮಾಹಿಕಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ.