ಸಂಗಮೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಆಗ್ರಹ
ಗಜೇಂದ್ರಗಡ: ನಿರ್ಲಕ್ಷ್ಯಕ್ಕೊಳಗಾಗಿ ಶಿಥಿಲಾವಸ್ಥೆಗೊಂಡ ಐತಿಹಾಸಿಕ ಹಿನ್ನೆಲೆಯುಳ್ಳ ಸಮೀಪದ ಉಣಚಗೇರಿ ಗ್ರಾಮ ಬಳಿಯ ಕಲ್ಗುಡಿ ಸಂಗಮೇಶ್ವರ ದೇಗುಲದ ಜೀರ್ಣೋದ್ಧಾರಕ್ಕಾಗಿ ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಭಗವಂತಗೌಡ ಪಾಟೀಲ್ ಮಾತನಾಡಿ, ಚಾಲುಕ್ಯರ ಕಾಲದಲ್ಲಿ ನಿರ್ಮಿತಗೊಂಡ ಈ ದೇಗುಲ ದಕ್ಷಿಣ ಕಾಶಿ ಕೂಡಲ ಸಂಗಮೇಶ್ವರ ದೇವಸ್ಥಾನದಷ್ಟೇ ಪ್ರಸಿದ್ಧಿ ಪಡೆದಿತ್ತು. ಅಲ್ಲದೇ ಅಲ್ಲಿನ ನದಿಗಳ ಹಾಗೇ ಈ ದೇಗುಲ ಪಕ್ಕದಲ್ಲಿ ಹಳ್ಳಗಳು ಹಾದು ಹೊಗಿದ್ದಲ್ಲದೇ, ಇಲ್ಲಿನ ಹಳ್ಳಗಳು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತಿರುವುದು ಹಲವಾರು ವಿಶೇಷತೆಗಳಿಗೆ ಕಾರಣವಾಗಿದೆ. ದೇಗುಲದ ಗರ್ಭ ಗುಡಿಯಲ್ಲಿ ಉದ್ಭವ ಶಿವಲಿಂಗ ಮತ್ತು ನಂದಿಯ ಮೂರ್ತಿಗಳು ಬಹುತೇಕ ಭಗ್ನಾವಸ್ಥೆಯಲ್ಲಿವೆ. ಜತೆಗೆ ಸಂಪೂರ್ಣ ಕಲ್ಲಿನಲ್ಲಿ ಸುಂದರ ಕೆತ್ತನೆಯಿಂದ ಕೂಡಿದ ಈ ದೇವಸ್ಥಾನ ಚಾಲುಕ್ಯರ ಕಾಲದಲ್ಲಿ ನಿರ್ಮಿತಗೊಂಡಿತ್ತು ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಇಂತಹ ಐತಿಹಾಸಿಕ ಹಿನ್ನೆಲೆಯ ದೇಗುಲ ನಿರ್ಲಕ್ಷ್ಯದಿಂದಾಗಿ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದೇಗುಲದ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರಿಂದ ಉಗ್ರ ಪ್ರತಿಭಟನೆ ಎದುರಿಸಬೇಕಾಗುವುದು ಎಂದರು. ಕಳಕಪ್ಪ ಪಟ್ಟಣಶಟ್ಟಿ, ಗುರುಶಿದ್ಧಯ್ಯ ಸೂಗಿರಯ್ಯನಮಠ, ಕಳಕಪ್ಪ ಸಂಗನಾಳ, ಡಾ. ಸಿದ್ದು ಹಳ್ಳದ, ಯಮನೂರ ಗಾಯಕವಾಡ, ಪರಪ್ಪ ಪಟ್ಟಣಶೆಟ್ಟಿ, ಸಂಗಪ್ಪ ಪಟ್ಟಣಶಟ್ಟಿ, ಕರಿಯಪ್ಪ ಪಟ್ಟಣಶಟ್ಟಿ, ಶರಣಪ್ಪ ಹಿರೇಕೊಪ್ಪ, ದೇವಪ್ಪ ಹಳ್ಳಿಕೇರಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಶರಣಪ್ಪ ಹುಡೇದ, ಪ್ರಕಾಶ ತಳವಾರ, ಸಂಗಪ್ಪ ಚಿಲಝರಿ, ಈಶಪ್ಪ ಕಲಾಲಬಂಡಿ, ಅಲ್ಲಾಸಾಬ ನದಾಫ, ಬಸವರಾಜ ಗೌಡರ, ಪ್ರಕಾಶ ಕಲಾಲಬಂಡಿ, ಶರಣಪ್ಪ ಬಡಿಗೇರ, ಮರಿಯಪ್ಪ ಕಂಟಿ ಮುಂತಾದವರು ಉಪಸ್ಥಿತರಿದ್ದರು.