ಟಿಕೆಟ್: ಜಾತಿ ಲೆಕ್ಕಾಚಾರವೇ ಜೋರು
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 24
ಸ್ಥಳೀಯ ಸಂಸ್ಥೆ ಚುನಾವಣೆಗೆ ಜಿಲ್ಲಾದ್ಯಂತ ಸಲ್ಲಿಕೆಯಾಗಿರುವ ಸಾವಿರಕ್ಕೂ ಹೆಚ್ಚು ನಾಮಪತ್ರಗಳಲ್ಲಿ ಅಧಿಕೃತವಾಗಿ ಪಕ್ಷಗಳ ಬಿ ಫಾರಂ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಜಾತಿ ಪ್ರಮುಖ ಆಧಾರವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಜಿಲ್ಲೆಯ 203 ವಾರ್ಡ್ಗಳಿಗೆ ಚುನಾವಣೆ ನಡೆಯಲಿದ್ದು, ಪ್ರಮುಖ ರಾಷ್ಟ್ರೀಯ ಪಕ್ಷಗಳು ನಾವು ಜಾತಿಯನ್ನು ಮಾನದಂಡವಾಗಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡಿಲ್ಲವೆಂದು ಹೇಳುತ್ತಿವೆ. ಆದರೆ, ರಾಷ್ಟ್ರೀಯ ಪಕ್ಷಗಳ ಪಟ್ಟಿಯನ್ನು ನೋಡಿದ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ. ಅವರು ನೈಜ ಕಾರ್ಯಕರ್ತರಿಗಿಂತ ಆಯಾ ವಾರ್ಡ್ಗಳಲ್ಲಿ ಯಾವ ಜಾತಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆನ್ನುವುದನ್ನು ಅರಿತು ಆ ವರ್ಗದವರಿಗೆ ಟಿಕೆಟ್ ನೀಡಿದ್ದು, ಇದು ಸಹಜವಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ಬೇಸರವನ್ನುಂಟು ಮಾಡಿದೆ.
ಮೇಲ್ವರ್ಗಕ್ಕೆ ಸಿಂಹಪಾಲು: ಸಲ್ಲಿಕೆಯಾಗಿರುವ ನಾಮ ಪತ್ರಗಳಲ್ಲಿ ಬಹುತೇಕ ಎಲ್ಲ ರಾಷ್ಟ್ರೀಯ ಮತ್ತು ಸ್ಥಳೀಯ ಪಕ್ಷಗಳು ಮೇಲ್ವರ್ಗಕ್ಕೆ ಹೆಚ್ಚಿನ ಟಿಕೆಟ್ ನೀಡಿವೆ. ಅದರಲ್ಲಿಯೂ ಬಿಜೆಪಿ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಹಿಂದುಳಿದವರ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಈ ಬಾರಿ ಹಿಂದುಳಿದ ವರ್ಗಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಮಾತ್ರ ಟಿಕೆಟ್ ನೀಡಿದೆ. ಕೆಲವು ಸಾಮಾನ್ಯ ವಾರ್ಡ್ಗಳಲ್ಲಿ ಉತ್ತಮವಾಗಿ ಕೆಲಸ ಮಾಡುವ ಹಿಂದುಳಿದ ವರ್ಗದ ಕಾರ್ಯಕರ್ತರಿದ್ದರೂ ಅವರನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪ ಅವರ ಪಕ್ಷಗಳಿಂದಲೇ ಕೇಳಿ ಬರುತ್ತಿದೆ. ಇನ್ನು ಜೆಡಿಎಸ್ ಮತ್ತು ಬಿಎಸ್ಸಾರ್ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಪ್ರಾದೇಶಿಕ ಪಕ್ಷಗಳಲ್ಲಿ ಹಿಂದುಳಿದವರಿಗೆ ಕೊಂಚ ಹೆಚ್ಚಿನ ಆದ್ಯತೆ ನೀಡಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ನಗರಸಭೆ ವಿವರ: ಗದಗ-ಬೆಟಗೇರಿ ನಗರಸಭೆಯ 35 ವಾರ್ಡ್ಗಳಲ್ಲಿ ಜೆಡಿಎಸ್ 28 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದು, 10 ಜನ ಲಿಂಗಾಯತರಿಗೆ, 2 ಕ್ರಿಶ್ಚಿಯನ್, 5 ಹಿಂದುಳಿದ, 6 ಎಸ್ಸಿ ಹಾಗೂ 5 ಜನ ಮುಸ್ಲಿಮರಿಗೆ ಟಿಕೆಟ್ ನೀಡಿದೆ. ಇನ್ನು ಕೆಜೆಪಿ 12 ಜನ ಲಿಂಗಾಯತರು, 6 ಹಿಂದುಳಿದ ವರ್ಗದವರಿಗೆ, 3 ಎಸ್ಸಿ, 2 ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಿದೆ. ಇನ್ನು ಬಿಜೆಪಿ 16 ಜನ ಲಿಂಗಾಯತರು, 3 ಎಸ್ಸಿ, ಇನ್ನುಳಿದಂತೆ ಹಿಂದುಳಿದ ವರ್ಗದವರಿಗೆ ನೀಡಿದ್ದಾರೆ. ಇನ್ನು ಕಾಂಗ್ರೆಸ್ 10 ಜನ ಲಿಂಗಾಯತರಿಗೆ, 4 ಜನ ಅಲ್ಪ ಸಂಖ್ಯಾತರು, 6 ಜನ ಹಿಂದುಳಿದ ವರ್ಗ ಹಾಗೂ 4 ಎಸ್ಸಿಗೆ ಟಿಕೆಟ್ ನೀಡಿದ್ದು, ಇದು ಕೇವಲ ಗದಗ-ಬೆಟಗೇರಿ ನಗರಸಭೆಯಲ್ಲಿ ಮಾತ್ರ. ಜಿಲ್ಲೆಯ ಎಲ್ಲ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಜಾತಿ ಕರಾಮತ್ತು ಬಲು ಜೋರಾಗಿಯೇ ನಡೆದಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕಾರ್ಯಕರ್ತರಲ್ಲಿ ಅಸಮಾಧಾನ: ಕಾರ್ಯಕರ್ತರ ನೈಜ ಶ್ರಮಕ್ಕಿಂತ ಅಭ್ಯರ್ಥಿಯಾಗುವವನಿಗೆ ಉತ್ತಮ ಜಾತಿಯ ಹಿನ್ನೆಲೆ ಇರಬೇಕು ಎನ್ನುವುದಕ್ಕೆ ನಿದರ್ಶನ. ಶನಿವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೋರ್ವ ಟಿಕೆಟ್ ಸಿಗದೇ ಇರುವುದನ್ನು ಖಂಡಿಸಿ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿಯೇ ಸೀಮೆ ಎಣ್ಣೆ ಹಿಡಿದುಕೊಂಡು ಪ್ರತಿಭಟನೆ ಮಾಡಿದ ಘಟನೆಯೂ ನಡೆದಿದೆ. ಎಲ್ಲೆಡೆ ಅಷ್ಟೊಂದು ಹೆಚ್ಚಿನ ಪ್ರತಿಭಟನೆ ನಡೆದಿಲ್ಲವಾದರೂ ಪ್ರತಿ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ನೈಜ ಕಾರ್ಯಕರ್ತರು ಟಿಕೆಟ್ ವಂಚಿತರಾಗಿದ್ದಾರೆ. ಇದರಿಂದ ಕೆಲ ಪಕ್ಷಗಳ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಹೊಗೆಯಾಡುತ್ತಿದೆ. ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದು, ಇದು ಪ್ರಮುಖ ಪಕ್ಷಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.