ಮಾ.1ರಂದು ಚುನಾವಣಾ ಸಿಬ್ಬಂದಿಗೆ ತರಬೇತಿ
ಗದಗ: ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿರುವ ಮತಗಟ್ಟೆ ಸಿಬ್ಬಂದಿ ಹಾಗೂ ವಿದ್ಯುನ್ಮಾನ ಮತ ಯಂತ್ರಗಳ ಸಿದ್ಧತೆ ಮತ್ತು ಪರಿಶೀಲನೆಗಾಗಿ ಮಾ. 1ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ತರಬೇತಿ ವ್ಯವಸ್ಥೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ತರಬೇತಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಒಟ್ಟು 285 ಮತಗಟ್ಟೆಗಳಿಗೆ ಪ್ರತಿ ಮತಗಟ್ಟೆಗೆ 4 ಜನರಂತೆ ನೇಮಕಗೊಂಡ 1140 ಸಿಬ್ಬಂದಿ ಹಾಗೂ ಶೇ. 10 ರಷ್ಟು ಹೆಚ್ಚುವರಿ ಅಂದರೆ 114 ಸಿಬ್ಬಂದಿ ಸೇರಿ ಒಟ್ಟು 1254 ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಾಗುವರು. ಗದಗ-ಬೆಟಗೇರಿ-144, ಲಕ್ಷ್ಮೇಶ್ವರ, ಮುಂಡರಗಿ, ರೋಣ ಹಾಗೂ ನರಗುಂದ ಪುರಸಭೆ ತಲಾ 23, ಪಪಂಗಳಾದ ಶಿರಹಟ್ಟಿ-17, ಗಜೇಂದ್ರಗಡ-25, ನರೇಗಲ್ಲ-18 ಹಾಗೂ ಮುಳಗುಂದ-19 ಮತಗಟ್ಟೆಗಳನ್ನು ಹೊಂದಿವೆಯೆಂದು ತಿಳಿಸಿದ್ದಾರೆ.