ಯಾವಗಲ್ ಆರೋಪ (ಸುದ್ದಿ ಸಂಕ್ಷೇಪ)
ನರಗುಂದ: ಪುರಸಭೆ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಾರದೆಂದು ಕೆಲ ವಾರ್ಡ್ನ ಅಭ್ಯರ್ಥಿಗಳಿಗೆ ಶಾಸಕರು ಧಮಕಿ ಹಾಕಿದ್ದಾರೆ. ಇಂತಹ ಗೂಂಡಾಗಿರಿ ಎದುರಿಸಲು ಕಾಂಗ್ರೆಸ್ ಸಿದ್ಧ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಹೇಳಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗಳು 23 ವಾರ್ಡ್ಗಳಿಗೆ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದ ಸಂದರ್ಭ ಕೆಲವು ವಾರ್ಡ್ಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಬಾರದೆಂದು ಬೆದರಿಕೆ ಹಾಕಿದ್ದಾರೆ. ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿದ್ದುಕೊಂಡು ಈ ರೀತಿಯ ಕೀಳು ಮಟ್ಟದ ರಾಜಕೀಯ ನಡೆಸುತ್ತಿರುವುದು ಖಂಡನಾರ್ಹ. ಈ ಹಿಂದೆ ಪುರಸಭೆ ಸದಸ್ಯರಾಗಿದ್ದವರು ಪುರಸಭೆಗೆ ಬಂದ ಎಲ್ಲ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡದೇ ತಾವೇ ಅವುಗಳನ್ನು ಕಳಪೆಯಾಗಿ ಮಾಡಿ ಕೋಟ್ಯಂತರ ಹಣ ಲೂಟಿ ಮಾಡಿದ್ದಾರೆ ಎಂದರು. ಚಂಬಣ್ಣ ವಾಳದ, ವಿಠ್ಠಲ ಶಿಂಧೆ, ಗುರುಪಾದಪ್ಪ ಕುರಹಟ್ಟಿ, ಹನುಮಂತಗೌಡ ಕಗದಾಳ, ಎಸ್.ಆರ್. ಪಾಟೀಲ, ಎಫ್.ವೈ. ದೊಡಮನಿ ಮತ್ತಿತರರು ಇದ್ದರು.
ಅಸಹಜ ಸಾವು
ಗದಗ: ನಗರದ ತ್ರಿಕೂಟೇಶ್ವರ ದೇವಸ್ಥಾನದ ಬಳಿ ಭಾನುವಾರ ಯುವಕನೋರ್ವ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದು, ಅವನ ಜತೆಗಿದ್ದ ಮತ್ತೊಬ್ಬ ತೀವ್ರ ಅಸ್ವಸ್ಥಗೊಂಡಿದ್ದಾನೆ. ಈ ಘಟನೆ ಸಾರ್ವಜನಿಕರಲ್ಲಿ ಹಲವು ಸಂಶಯ ಮೂಡಿಸಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಸಿಕ್ಕಲಗಾರ ಸಮುದಾಯಕ್ಕೆ ಸೇರಿದ ಹನುಮಂತಪ್ಪ ದುರ್ಗಪ್ಪ ನವಲಗುಂದ (24) ಎಂದು ಗುರುತಿಸಲಾಗಿದೆ. ಈತನೊಂದಿಗಿದ್ದ ಗಾಳೆಪ್ಪ ನವಲಗುಂದ (25) ತೀವ್ರ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ. ಅತಿಯಾದ ಮದ್ಯ ಸೇವನೆ ಕಾರಣವಿದ್ದೀತು ಎಂಬ ಶಂಕೆ ವ್ಯಕ್ತವಾಗಿದೆ. ಸಂಪೂರ್ಣ ವೈದ್ಯಕೀಯ ತನಿಖೆಯಿಂದ ಸತ್ಯಾಂಶ ಹೊರಗೆ ಬರಬೇಕಿದೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ
ಮುಂಡರಗಿ: ಪಟ್ಟಣದ ನಿವಾಸಿಯೋರ್ವ ಹೊಟ್ಟೆ ನೋವಿನ ಬಾಧೆ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಮೃತನನ್ನು ವಿಷ್ಣುವರ್ಧನ ಈರಣ್ಣ ಅಳವಂಡಿ (37) ಎಂದು ಗುರುತಿಸಲಾಗಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.