ಜನತೆ ಒಲವು ಕಾಂಗ್ರೆಸ್ನತ್ತ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 26
ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿಯೇ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಿ, ಯಶಸ್ಸು ಸಾಧಿಸುತ್ತೇವೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಎಷ್ಟೊಂದು ಜನಪರ ಕೆಲಸ ಮಾಡಿದೆ. ರಾಜ್ಯದ ಹಿತ ಕಾಯುವಲ್ಲಿ ಇವರು ಯಾವ ಪಾತ್ರ ವಹಿಸಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ. ಬಿಜೆಪಿಯ ಭ್ರಷ್ಟಾಚಾರ, ಜನವಿರೋಧಿ ಆಡಳಿತ, ಆಂತರಿಕ ಕಚ್ಚಾಟದಿಂದ ಜನತೆ ಬೇಸತ್ತಿದ್ದಾರೆ ಎಂದರು.
ಜನತೆ ಒಲವು ಕಾಂಗ್ರೆಸ್ನತ್ತ: ಕೇವಲ ಗದಗ ಜಿಲ್ಲೆಯನ್ನು ಮಾತ್ರವಲ್ಲ, ರಾಜ್ಯದ ದೃಷ್ಟಿ ಕೋನವನ್ನು ಗಮನದಲ್ಲಿಟ್ಟುಕೊಂಡು ನೀವೇ ಆಲೋಚಿಸಿ, ಆಡಳಿತಾರೂಢ ಬಿಜೆಪಿ ಸರ್ಕಾರದ ಹಲವಾರು ಹಾಲಿ ಶಾಸಕರೇ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂದರೆ ಏನರ್ಥ, ಆ ಪಕ್ಷ ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ನಮಗಿಂತ ಅವರಿಗೇ ಮನವರಿಕೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಜನತೆಯ ಒಲವು ಕಾಂಗ್ರೆಸ್ನತ್ತವಿದೆ. ನಾವು ಜಿಲ್ಲೆಯ ಎಲ್ಲ ಪುರಸಭೆ ಮತ್ತು ಪಟ್ಟಣ ಪಂಚಾಯ್ತಿ ಹಾಗೂ ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.
ಪಕ್ಷದಲ್ಲಿ ಗೊಂದಲವಿಲ್ಲ: ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಕೆಲ ಅತೃಪ್ತರು ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ನಲ್ಲಿ ಅಂತಹ ಯಾವುದೇ ತೊಂದರೆ ಇಲ್ಲ. ಕೆಲ ಸಣ್ಣ ಪುಟ್ಟ ವಿರೋಧಗಳು ವ್ಯಕ್ತವಾಗಿದ್ದರೂ ಅದನ್ನು ಪಕ್ಷವು ಈಗಾಗಲೇ ಇತ್ಯರ್ಥಗೊಳಿಸಿದೆ. ಚುನಾವಣೆಯ ವೇಳೆಯಲ್ಲಿ ಜಿಲ್ಲೆಯ 203 ವಾರ್ಡ್ಗಳಲ್ಲಿ ಯಾವೊಂದು ವಾರ್ಡ್ಗಳಲ್ಲಿ ಸಾರ್ವಜನಿಕರಿಗೆ ಗೊಂದಲ ಉಂಟಾಗುವಂತಹ ಸ್ಥಿತಿ ಇಲ್ಲ. ಟಿಕೆಟ್ ಹಂಚಿಕೆಯಲ್ಲಿ ಆಯಾ ವಾರ್ಡ್ಗಳ ಹಿರಿಯರ ಸಮಕ್ಷಮದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.
ಪ್ರಾದೇಶಿಕ ಪಕ್ಷಗಳಿಂದ ಪೈಪೋಟಿ ಇಲ್ಲ: ಪ್ರಾದೇಶಿಕ ಪಕ್ಷಗಳು ಈ ಬಾರಿ ಹೆಚ್ಚಿನ ಪೈಪೋಟಿ ನೀಡುವ ಸಾಧ್ಯತೆ ನಿಮಗೆ ಕಂಡು ಬರುತ್ತಿದೆಯೇ ಎಂದಾಗ, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಗದಗ ಜಿಲ್ಲೆಯಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಜಿಲ್ಲೆಯ ಜನತೆ ಬಹಳ ಪ್ರಬುದ್ಧರಾಗಿದ್ದಾರೆ. ಹಾಗಾಗಿ ನಮಗೆ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷವೇ ನಮ್ಮ ನೇರು ಎದುರಾಳಿ ಎಂದರು. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲವೆಂದು ಹೇಳುತ್ತಿದ್ದೀರಿ ಆದರೆ, ಮುಂಡರಗಿ ಪಟ್ಟಣದಲ್ಲಿ ಕಾರ್ಯಕರ್ತನೋರ್ವ ಟಿಕೆಟ್ಗಾಗಿ ಪ್ರತಿಭಟನೆ ಮಾಡಿದ ಬಗ್ಗೆ ಕೇಳಿದಾಗ, ಅದು ಅತಿರೇಕದ ವರ್ತನೆ ಅಷ್ಟೇ, ಈ ಕುರಿತು ಅಲ್ಲಿನ ನಮ್ಮ ನಾಯಕರು ಸಮಸ್ಯೆ ಬಗೆ ಹರಿಸಿದ್ದಾರೆ ಎಂದರು.
ಯುವಕರಿಗೆ ಆದ್ಯತೆ: ಅವಳಿ ನಗರದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಈ ಬಾರಿ ಯುವಕರಿಗೆ ಪ್ರಾತಿನಿಧ್ಯ ನೀಡಿದ್ದೀರಿ, ಇದು ರಾಹುಲ್ ಗಾಂಧಿ ಅವರ ಆದೇಶವೋ ಅಥವಾ ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿ ಇಟ್ಟುಕೊಂಡು ಮಾಡಿದ ನಿರ್ಧಾರವೋ ಎನ್ನುವ ಪ್ರಶ್ನೆಗೆ, ಜಾಣ್ಮೆಯ ಉತ್ತರ ನೀಡಿದ ಪಾಟೀಲರು, ಇದು ನೀವು ಹೇಳಿದಂತೆ ರಾಹುಲ್ ಅವರ ಆದೇಶವೂ ಹೌದು. ಅವಳಿ ನಗರದ ಹಿರಿಯ ಕಾಂಗ್ರೆಸ್ ನಾಯಕರ ಇಚ್ಛೆಯೂ ಹೌದು ಎನ್ನುವ ಮೂಲಕ ಮುಂದಿನ ಚುನಾವಣೆಯ ದೃಷ್ಟಿಕೋನದಿಂದಲೇ ಯುವಕರಿಗೆ ಆದ್ಯತೆ ನೀಡಲಾಗಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದು ಗಮನಾರ್ಹವಾಗಿತ್ತು.
ಕೋಟ್ಯಂತರ ಹಣ ದುರುಪಯೋಗ: ರಾಜ್ಯ ಸರ್ಕಾರ ಕಳೆದ ವರ್ಷದಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದೆ ಎಂದು ಹೇಳುತ್ತಿದ್ದರೆ, ನಿಮ್ಮ ಪಕ್ಷದ ನಾಯಕರು ಈ ಅನುದಾನದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, ಸಣ್ಣ ಮತ್ತು ಮಧ್ಯಮ ಪಟ್ಟಣದ ಅಭಿವೃದ್ಧಿಗಾಗಿ ನೀಡಿದ ಅನುದಾನದಲ್ಲಿ ಭ್ರಷ್ಟಾಚಾರದ ವಾಸನೆ ಇರುವುದು ಸತ್ಯ. ಇದಕ್ಕಿಂತ ಮುಖ್ಯವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳೆದ 4 ವರ್ಷದಲ್ಲಿ ವಿವಿಧ ಯೋಜನೆಗಳಲ್ಲಿ ರು. 1 ಲಕ್ಷ ಕೋಟಿ ಹಣ ನೀಡಿದೆ. ಆದರೆ, ರಾಜ್ಯ ಸರ್ಕಾರದಿಂದ ಅದರ ಸದ್ವಿನಿಯೋಗವಾಗಿಲ್ಲ. ಈ ಹಣದಲ್ಲಿ ರಾಜಕೀಯ ನಾಯಕರ ಗುತ್ತಿಗೆದಾರಿಕೆ. ಭ್ರಷ್ಟ ಅಧಿಕಾರಿಗಳ ಸಹಕಾರದ ಮೂಲಕ ಕೋಟಿ ಕೋಟಿ ಹಣ ದುರುಪಯೋಗವಾಗಿದ್ದು, ಈ ಬಗ್ಗೆ ರಾಜ್ಯದ ಪ್ರತಿಯೊಬ್ಬ ಸಾರ್ವಜನಿಕರಿಗೂ ಮಾಹಿತಿ ಇದೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಏನೆಲ್ಲಾ ಅವಾಂತರಗಳನ್ನು ಮಾಡಿದೆ. ರಾಜ್ಯದ ನೈಸರ್ಗಿಕ ಸಂಪತ್ತನ್ನು ಎಷ್ಟು ಲೂಟಿ ಮಾಡಿದೆ. ಜನತೆಗೆ ಎಷ್ಟೊಂದು ಗೊಂದಲದ ಆಡಳಿತ ನೀಡಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಎಲ್ಲ ವೈಫಲ್ಯಗಳನ್ನೇ ನಮ್ಮ ಕಾರ್ಯಕರ್ತರು ಸಮರ್ಥವಾಗಿ ಮತದಾರರಿಗೆ ತಿಳಿಸಿ, ಆ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಗಲಿರುಳು ಶ್ರಮಿಸಲಿದ್ದಾರೆ ಎಂದರು.