ರೈಲ್ವೆ ಬಜೆಟ್ 2013 ಜನ ಏನಂತಾರೆ?
ರಾಜ್ಯದ ಪಾಲಿಗೆ ಯಾವುದೇ ಹೊಸ ಯೋಜನೆಗಳಿಲ್ಲದೇ ತೀವ್ರ ಅನ್ಯಾಯವಾಗಿದೆ. ಬಜೆಟ್ ಅಧಿವೇಶನ ಪೂರ್ವದಲ್ಲಿಯೇ ರೇಲ್ವೆ ಸಚಿವರನ್ನು ಖುದ್ದು ಭೇಟಿ ಮಾಡಿ, ಪತ್ರದ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
-ಶಿವಕುಮಾರ್ ಉದಾಶಿ
ರೇಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಯೋಜನೆಗಳು ದೊರೆತಿಲ್ಲವಾದರೂ ರೇಲ್ವೆ ಪ್ರಯಾಣ ದರ ಹೆಚ್ಚಿಸದೇ ಜನಪರ ಬಜೆಟ್ ಮಂಡಿಸಿದ್ದಾರೆ. ಉತ್ತರ ಕರ್ನಾಟಕ್ಕೆ ಹೆಚ್ಚಿನ ಯೋಜನೆಗಳನ್ನು ನೀಡಬೇಕಿತ್ತು.
-ಅಶೋಕ ಮಂದಾಲಿ
ಗದಗ ಜಿಲ್ಲೆಯ ಜನರ ಪಾಲಿಗೆ ಸಂಪೂರ್ಣ ನಿರಾಶಾದಾಯಕವಾಗಿದೆ. ಸಾಕಷ್ಟು ನಿರೀಕ್ಷೆಯಲ್ಲಿದ್ದ ಜನರ ಆಸೆಗಳಿಗೆ ಪ್ರಸ್ತುತ ಬಜೆಟ್ ತಣ್ಣೀರೆರಚಿದಂತಾಗಿದೆ. ಗದಗ, ಬಿಜಾಪುರ, ಬಾಗಲಕೋಟೆ, ಧಾರವಾಡದ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ.
-ವಿಜಯ ಮುಳಗುಂದ
ಈ ಹಿಂದೆ ರೇಲ್ವೆ ಬಜೆಟ್‌ನಲ್ಲಿ ಮಂಡಿಸಿದ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಜನಪರವಾದ ಯಾವುದೇ ಯೋಜನೆಗಳಿಲ್ಲ. ಗದಗ ಜಿಲ್ಲೆಯ ಮಟ್ಟಿಗಂತೂ ಅತ್ಯಂತ ನಿರಾಶಾದಾಯಕ ಬಜೆಟ್ ಇದಾಗಿದೆ.
-ವೆಂಕನಗೌಡ ಗೋವಿಂದಗೌಡ್ರ
ರೇಲ್ವೆ ಬಜೆಟ್ ನಮ್ಮ ರಾಜ್ಯಕ್ಕೆ ಅನುಕೂಲಕರವಾಗಿದೆ. ಮೀಟರ್‌ಗೇಜ್‌ದಿಂದ ಬ್ರಾಡ್‌ಗೇಜ್, ಬ್ರಾಡ್‌ಗೇಜ್‌ನಿಂದ ಎಲೆಕ್ಟ್ರಿಕ್, ಕೋಲಾರದಲ್ಲಿ ಬೋಗಿಗಳ ನಿರ್ಮಾಣ ಘಟಕ ಸ್ಥಾಪನೆ ಸ್ವಾಗತಾರ್ಹ.
-ಗಣೇಶಸಿಂಗ್ ಬ್ಯಾಳಿ
ಕೇಂದ್ರ ರೇಲ್ವೆ ಸಚಿವರು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯವಾಗಿದೆ. ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಹೊಸ ಯೋಜನೆಗಳನ್ನು ನೀಡಿಲ್ಲ. ಈ ಬಜೆಟ್‌ನಿಂದ ಯಾವುದೇ ಅನುಕೂಲವಿಲ್ಲ.
-ವಿಶ್ವನಾಥ ಖಾನಾಪುರ
ಗದಗ ಜಿಲ್ಲೆ ಸೇರಿದಂತೆ ಹೊಸ ಯೋಜನೆಗಳ ಬಗ್ಗೆ ಚಿಂತನೆ ಇಲ್ಲ. ಗದಗ-ಸೊಲ್ಲಾಪುರ ಮಧ್ಯೆ ಹೆಚ್ಚಿನ ರೇಲ್ವೆ ಸಂಪರ್ಕ ಕಲ್ಪಿಸಲು ಗಮನ ನೀಡಿಲ್ಲ. ಹೊಸ ರೇಲ್ವೆ ಯೋಜನೆಗಳಿಗೆ ಯಾವುದೇ ಅನುದಾನ ನೀಡಿಲ್ಲ.
-ನಿಸಾರ್ ಅಹ್ಮದ ಖಾಜಿ
ಗದಗ ವಾಣಿಜ್ಯ ವಿಷಯದಲ್ಲಿ ಬೆಳವಣಿಗೆ ಹೊಂದುತ್ತಿರುವ ಪ್ರದೇಶವಾಗಿದ್ದು, ಇದಕ್ಕೆ ರೇಲ್ವೆ ಸೇವೆ ಅವಶ್ಯಕವಾಗಿದ್ದು, ಇದನ್ನು ನೀಡುವಲ್ಲಿ ಕೇಂದ್ರ ಸರ್ಕಾರ ಮತ್ತೆ ವಿಫಲವಾಗಿದೆ. ಇದೊಂದು ಜನ ವಿರೋಧಿ ಬಜೆಟ್.
-ರಾಜು ಕುರುಡಗಿ
ಗದಗ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಹೊಸ ಯೋಜನೆಗಳನ್ನು ನೀಡಿಲ್ಲ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಮತ್ತೊಮ್ಮೆ ಸಾಬೀತಾಗಿದೆ.
-ವೈ.ಎನ್. ಗೌಡರ
ರಾಜ್ಯದ ಹಿತಕ್ಕೆ ಮಾರಕವಾಗಿದೆ. ಗದಗ ಜಿಲ್ಲೆಯ ಮಟ್ಟಿಗಂತಲೂ ಇದೊಂದು ನಿರಾಶದಾಯಕ ಬಜೆಟ್ ಆಗಿದೆ. ನೂತನ ರೇಲ್ವೆ ಮಾರ್ಗಗಳ ಕುರಿತು ಈ ಹಿಂದೆಯೇ ಘೋಷಣೆ ಮಾಡಿದ್ದರೂ ಅದಕ್ಕೆ ಅನುದಾನ ನೀಡದೇ ಇರುವುದು ಬೇಸರದ ಸಂಗತಿ.
-ಚಂದ್ರಕಾಂತ ಚವಾಣ