ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರು

Lingaraj Badiger
Updated On : 1 Mar 2013, 11:06 am

-ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಪಟ್ಟಣದಲ್ಲಿ ಈಗ ಸ್ಥಳೀಯ ಸಂಸ್ಥೆ ಚುನಾವಣೆಯ ಹಬ್ಬ ಶುರುವಾಗಿದೆ. ದುಡಿಯಲು ಊರು ಬಿಟ್ಟು ಹೋದವರು ಜಾತ್ರೆಗೆ ಬರುವಂತೆ ಪಟ್ಟಣಕ್ಕೆ ಬರುತ್ತಿದ್ದಾರೆ.
ರಾಜಕಾರಣಿಗಳಿಗಂತೂ ಚುನಾವಣೆ ಎಂದರೆ ಎಲ್ಲಿಲ್ಲದ ಪ್ರೀತಿ. ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಂಡು, ಜನರಿಂದ ಮೆಚ್ಚುಗೆ ಪಡೆಯಬೇಕೆಂಬ ಮಹಾದಾಸೆಯೊಂದಿಗೆ ಈ ಬಾರಿ ಯುವಕರೇ ಹೆಚ್ಚಾಗಿ ಚುನಾವಣೆ ಕಣಕ್ಕಿಳಿದಿದ್ದಾರೆ.
ಚುನಾವಣೆಯ ದಿನ ಸಮೀಪಿಸುತ್ತಿದ್ದು, ಅಭ್ಯರ್ಥಿಗಳ ಪ್ರಚಾರ ಕಾರ್ಯವು ಜೋರಾಗಿಯೇ ನಡೆಯುತ್ತಿದೆ. ಆದರೆ, ಯುವಕರ ಗೆಲುವಿಗೆ ಶ್ರಮಿಸಲು ಹಿರಿಯ ರಾಜಕಾರಣಿಗಳು ಮುಂದಾಗದಿರುವುದಕ್ಕೆ ಯುವಕರ ನಿರಾಸಕ್ತಿಗೆ ಕಾರಣವಾಗಿದೆ.
ನೂಕು ನುಗ್ಗಲಿನಲ್ಲಿ ಉತ್ಸಾಹದಿಂದ ನಾಮಪತ್ರ ಸಲ್ಲಿಸಿದ ಕೆಲ ಆಕಾಂಕ್ಷಿಗಳಲ್ಲಿ ಇದೀಗ ಬೇಸರ ಮೂಡಿದಂಥ ಭಾವನೆ ಕಂಡು ಬರುತ್ತಿದೆ. ಮೊದಲು ನಾಮಪತ್ರ ಸಲ್ಲಿಸಿ, ಮುಂದೆ ನೋಡೋಣ ಎಂಬ ಹಿರಿಯ ರಾಜಕಾರಣಿಗಳ ಭರವಸೆಯಂತೆ ಯುವಕರು ನಡೆದುಕೊಂಡಿದ್ದು, ಇವರ ಗೆಲುವಿಗೆ ಪ್ರಮುಖ ಪಾತ್ರ ವಹಿಸಬೇಕಿದ್ದ ಹಿರಿಯ ರಾಜಕಾರಣಿಗಳು ನಿರಾಸಕ್ತಿ ತೋರಿಸುತ್ತಿದ್ದು, ಮತದಾನಕ್ಕೆ ಇನ್ನು ಮಾ. 7ರ ತನಕ ಕಾಲಾವಕಾಶವಿದೆ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿ ಬರುತ್ತಿವೆ. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅಭ್ಯರ್ಥಿಯಾಗಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿ ನಾಮಪತ್ರ ಸಲ್ಲಿಸಿದವರಲ್ಲಿ ಅನೇಕರಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಕೆಲವರಂತೂ ಚುನಾವಣೆ ಎದುರಿಸಿಯೇ ತೀರುವೆ ಎಂಬ ಛಲದೊಂದಿಗೆ ಅಖಾಡಕ್ಕಿಳಿದರೆ, ಕೆಲವರು ವಾಮ ಮಾರ್ಗಕ್ಕೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಕುದುರೆ ವ್ಯಾಪಾರ ಆರಂಭವಾಗಿದೆ. ಎದುರಾಳಿ ಬಲಾಢ್ಯರಾಗಿದ್ದರೆ ಉಳಿದವರನ್ನು ಹಣ, ರಾಜಕೀಯ ಪ್ರಭಾವ, ಒತ್ತಡತಂತ್ರ ಬಳಸಿ ಪ್ರಚಾರ ನಡೆಸದಂತೆ, ತಟಸ್ಥ ಉಳಿದು ಬೆಂಬಲ ವ್ಯಕ್ತಪಡಿಸುವಂತೆ ಕಾರ್ಯತಂತ್ರ ರೂಪಿಸುತ್ತಿರುವುದು ಕೆಲವೊಂದು ವಾರ್ಡ್‌ಗಳಲ್ಲಿ ಕಂಡು ಬರುತ್ತಿದೆ. ಇದರಲ್ಲಿ ಬಲೆಗೆ ಬೀಳುವವರಿಗಾಗಿ ಹುಡುಕಾಟದ ಪ್ರಯತ್ನವಂತೂ ಜೋರಾಗಿಯೇ ನಡೆದಿದೆ. ಮಾ. 7ರ ವರೆಗೂ ಇಂತಹ ರಾಜಕೀಯ ತಂತ್ರಗಳು ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ನಿತ್ಯ ಸಂಜೆ ಒಂದು ಘಂಟೆಗೂ ಹೆಚ್ಚು ಹೊತ್ತು ವಿದ್ಯುತ್ ಕಡಿತಗೊಳಿಸುತ್ತಿದ್ದು, ಮನೆ-ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದೆ ಎಂಬ ದೂರು ಕೇಳಿಬರುತ್ತಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸುವ ಸಮಯ ಬದಲಿಸುವಂತೆಯೂ ಒತ್ತಡ ಹೇರಲಾಗುತ್ತಿದೆ.
ಒಟ್ಟಾರೆ 16 ವಾರ್ಡ್‌ಗಳಲ್ಲಿಯೂ ಅಭ್ಯರ್ಥಿಗಳು ಚಾಣಕ್ಯತನದಿಂದ ಗೆಲುವಿಗಾಗಿ ತಮ್ಮ ಕೌಶಲ್ಯ ಪ್ರದರ್ಶಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement