ಇಂದು ಜಿಪಂ ಸದಸ್ಯ ಹಾವಿನಾಳ ರಾಜಿನಾಮೆ (ಸುದ್ದಿ ಸಂಕ್ಷೇಪ)
ಮುಂಡರಗಿ: ತಮಗೆ ತೃಪ್ತಿ ತರುವ ರೀತಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಆದ್ದರಿಂದ ತಾವು ಹಮ್ಮಿಗಿ ಜಿಲ್ಲಾ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ಬುಧವಾರ ರಾಜಿನಾಮೆ ನೀಡುವುದಾಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಹೇಳಿದರು.
ಮಂಗಳವಾರ ತಾಲೂಕಿನ ಶಿಂಗಟಾಲೂರು ವೀರಭದ್ರೇಶ್ವರ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಅನೇಕ ಕನಸುಗಳನ್ನು ಕಟ್ಟಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಾವು ಜಿಪಂ ಸದಸ್ಯರಾಗಿ ತೃಪ್ತಿಯಾಗುವಂತೆ ಕೆಲಸ ಮಾಡಲು ಆಗುತ್ತಿಲ್ಲ. ಆ ಆಸೆ ಈಡೇರುವುದಿಲ್ಲ ಎಂದು ಮನವರಿಕೆಯಾದ ಕಾರಣ ರಾಜಿನಾಮೆ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಋಣಿಯಾಗಿರುತ್ತೇನೆ. ಒಬ್ಬ ಸಾಮಾನ್ಯ ಮನುಷ್ಯನಾಗಿ ಇದ್ದುಕೊಂಡು ಸಹಾಯ ಮಾಡುತ್ತೇನೆ. ಕಾರ್ಯಕರ್ತರ ಜತೆ ಚರ್ಚಿಸಿ ತಮ್ಮ ಮುಂದಿನ ನಿರ್ಧಾರ ತಿಳಿಸುವುದಾಗಿ ಹಾವಿನಾಳ ಹೇಳಿದರು.
ಬುದ್ಧಿಮಾಂದ್ಯ ಮಕ್ಕಳೊಂದಿಗೆ ಪಾಟೀಲ್ ಜನ್ಮದಿನ ಆಚರಣೆ
ಗದಗ: ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಬುದ್ಧ್ದಿಮಾಂದ್ಯ ವಸತಿ ಶಾಲೆಯಲ್ಲಿ ಯುವ ನಾಯಕ ಸಚಿನ್ ಪಾಟೀಲ್ರ 33 ನೇ ಹುಟ್ಟು ಹಬ್ಬವನ್ನು ಈಚೆಗೆ ಆಚರಿಸಲಾಯಿತು. ಗದಗ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಸಚಿನ್ ಪಾಟೀಲರು ಬುದ್ದಿಮಾಂದ್ಯ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು. ಸಚಿನ್ ಪಾಟೀಲ್ ಮಾತನಾಡಿ, ಬುದ್ಧಿಮಾಂದ್ಯ ಮಕ್ಕಳ ಉಪಸ್ಥಿತಿಯಲ್ಲಿ ಮೊದಲ ಬಾರಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದೇನೆ. ನಿಜವಾಗಿಯೂ ನನಗೆ ಸಂತಸವಾಗಿದೆ.
ಈ ಮಕ್ಕಳು ಹಾಗೂ ಶಾಲೆಯನ್ನು ನೋಡಿದರೆ ಆಶ್ರಮವೊಂದಕ್ಕೆ ಬಂದ ಅನುಭವವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಶೋಕ ಮಂದಾಲಿ ವಹಿಸಿದ್ದರು. ಉಮರ್ಪಾರೂಖ ಹುಬ್ಬಳ್ಳಿ, ಅಂದಪ್ಪ ಕಣವಿ, ಬಸನಗೌಡ ಪಾಟೀಲ, ವಿಶ್ವನಾಥ ದೇಸಾಯಿ, ಚಾಂದ್ ಕೊಟ್ಟೂರು, ಮುತ್ತು ಬರಡಿ, ಅನ್ವರ್ ಶಿರಹಟ್ಟಿ, ಅಬ್ಬಾಸ್ ಲಾಲಕೋಟಿ, ಅಜಯ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು. ಮಂಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರಸಿಂಗ್ ರಜಪೂತ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಂದ್ರಸಿಂಗ್ ರಜಪೂತ ನಿರೂಪಿಸಿದರು. ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕರೀಂಸಾಬ್ ಸುಣಗಾರ ವಂದಿಸಿದರು.
ಇಂದು ಪೂರ್ವಭಾವಿ ಸಭೆ
ಗದಗ: ಜ. 20ರಂದು ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ನಡೆಯುವ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಲು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜ. 16ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ವಿ.ವಿ. ಕಪ್ಪತ್ತನವರ್ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಘಟಕಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಜಿಲ್ಲೆಯ ಪಕ್ಷದ ಹಿರಿಯ ಮುಖಂಡರುಗಳು ಉಪಸ್ಥಿತರಿರುವರು. ಈ ಸಭೆಗೆ ಎಲ್ಲ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿರಲು ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಅಂದಾನಯ್ಯ ಕುರ್ತಕೋಟಿಮಠ ತಿಳಿಸಿದ್ದಾರೆ.
ಬಾಲಗಂಗಾಧರನಾಥ ಶ್ರೀ ನಿಧನಕ್ಕೆ ಕಂಬನಿ
ಲಕ್ಷ್ಮೇಶ್ವರ: ಶೈಕ್ಷಣಿಕವಾಗಿ ಕ್ರಾಂತಿಯನ್ನು ಮಾಡಿ ಬಡವರ ಸೇವೆಗೆ ತಮ್ಮನ್ನು ಮುಡುಪಾಗಿಟ್ಟ ಬಾಲಗಂಗಾಧರ ಸ್ವಾಮಿಗಳ ಕಾರ್ಯವನ್ನು ಸಮಾಜದ ಎಲ್ಲ ವರ್ಗದ ಜನರನ್ನು ಮುನ್ನಡೆಸುವ ಆದರ್ಶ ಪೂಜ್ಯನೀಯವಾಗಿತ್ತು. ಅವರಿಲ್ಲದೆ ಈ ಲೋಕವಿಂದು ಬಡವಾಗಿದೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ಕಂಬನಿ ಮಿಡಿದ್ದಿದ್ದಾರೆ. ಲಕ್ಷ್ಮೇಶ್ವರದ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಎಸ್.ಎನ್.ಪಾಟೀಲ ಹಾಗೂ ಶಿಗ್ಲಿಯ ಸೋಮಣ್ಣ ಡಾಣಗಲ್ಲ, ವೀರಣ್ಣ ಪವಾಡದ, ಕೇಶವ ಗುಲಗಂಜಿ, ಕೃಷ್ಣಾ ಬಿದರಳ್ಳಿ ಮುಂತಾದವರು ಶ್ರೀಗಳ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಫೆ.10ರಿಂದ
ಗದಗ: ಮುಂಬರುವ ಫೆಬ್ರವರಿ 10ರಿಂದ ನಗರದ ವಿದ್ಯಾದಾನ ಸಮಿತಿ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 6.30 ಗಂಟೆಯಿಂದ 7.30 ಗಂಟೆಯ ವರೆಗೆ ಬಿಜಾಪುರದ ಜ್ಞಾನ ಯೋಗಾಶ್ರವುದ ಸಿದ್ದೇಶ್ವರ ಶ್ರೀಗಳ ಪ್ರವಚನ ಏರ್ಪಡಿಸಲು ಭಕ್ತರ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು. ಈಚೆಗೆ ಸ್ಥಳೀಯ ಕಾಟನ್ ಸೇಲ್ ಸೊಸಾಯಿಟಿಯ ಸಭಾಂಗಣದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು. ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ ಯಶಸ್ವಿಯಾಗಿ ಜರುಗಿಸಲು ಸಮಿತಿಗಳನ್ನು ರಚಿಸಲಾಯಿತು. ನಂತರ ಸ್ವಾಗತ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ಅಧ್ಯಕ್ಷರಾಗಿ ಡಿ.ಆರ್. ಪಾಟೀಲ, ಹಣಕಾಸು ಸಮಿತಿ ಅಧ್ಯಕ್ಷ ಬಸಣ್ಣ ಮಲ್ಲಾಡದ, ಪ್ರವಚನ ವ್ಯವಸ್ಥಾಪಕ ಸಮಿತಿ ಶ್ರೀನಿವಾಸ ಹುಯಿಲಗೋಳ, ಪ್ರಸಾದ ಸಮಿತಿಯ ಅಧ್ಯಕ್ಷರಾಗಿ ರವಿ ಮೂಲಿಮನಿ ಹಾಗೂ ಚಿಂತನ-ಮಂಥನ ಸಮಿತಿಯ ಅಧ್ಯಕ್ಷರಾಗಿ ಕೆ.ಎಚ್. ಬೇಲೂರ ಅವರನ್ನು ಆಯ್ಕೆಗೊಳಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಜೆಡಿಎಸ್ ಸಮಾವೇಶ
ಗಜೇಂದ್ರಗಡ: ರೋಣ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಜ. 20ರಂದು ಮಧ್ನಾಹ್ನ 3 ಗಂಟೆಗೆ ನರೇಗಲ್ಲ ಕನಕದಾಸ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಜೆಡಿಎಸ್ ತಾಲೂಕು ವಕ್ತಾರ ಕೆ.ಎಸ್. ಕೊಡತಗೇರಿ ಹೇಳಿದರು. ಈ ಕುರಿತು ಅವರು ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಮಾವೇಶವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸುವರು. ಮಾಜಿ ಸಚಿವ ಬಸವರಾಜ ಹೊರಟ್ಟಿ, ಜಮೀರ್ ಅಹಮ್ಮದ ಖಾನ್, ಇಕ್ಬಾಲ್ ಅನ್ಸಾರಿ, ಬಂಡೆಪ್ಪ ಕಾಶೆಂಪುರ, ಹನಮಂತಪ್ಪ ಆಲ್ಕೋಡ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಡಾ. ಬಿ.ಎಫ್. ದಂಡಿನ, ಜಿಲ್ಲಾಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ರವಿ ದಂಡಿನ, ನಿಂಗನಗೌಡ ಪಾಟೀಲ, ಶರಣಪ್ಪ ರೇವಡಿ, ರಾಮಣ್ಣ ಸಕ್ರೋಜಿ, ಬಿ.ಎಸ್. ಹಿರೇಗೌಡ್ರ, ಡಿ.ಎಂ. ಕಾತರಕಿ ಪಾಲ್ಗೊಳ್ಳುವರು. ಅಲ್ಲದೇ ಗದಗ ಜಿಪಂ ವಿರೋಧ ಪಕ್ಷದ ನಾಯಕ ಹೇಮಗಿರೀಶ ಹಾವಿನಾಳ ಕಾಂಗ್ರೆಸ್ ಪಕ್ಷ ತೊರೆದು ತಮ್ಮ ನೂರಾರು ಬೆಂಬಲಿಗರೊಂದಿಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಜೆಡಿಎಸ್ ಸೇರುವರು.