ಗ್ರಾಮೀಣರಿಗೆ ಮೂಲ ಸೌಲಭ್ಯ: ತುರಮರಿ
ಮುಂಡರಗಿ: ಗ್ರಾಮೀಣ ಪ್ರದೇಶಗಳಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಜಿಪಂ ಸಿಇಓ ವೀರಣ್ಣ ತುರಮರಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ಶಿಂಗಟಾಲೂರು ವೀರಭದ್ರೇಶ್ವರ ಕ್ಷೇತ್ರದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಗದಗ, ಸ್ಮಾಟ್ ಅಕ್ವಾಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಹೈದರಾಬಾದ್ ಇವುಗಳ ಸಹಯೋಗದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿವ ನೀರಿನ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಇಲ್ಲಿ ನಿತ್ಯ ಬಂದು ಹೋಗುವ ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿವ ನೀರಿನ ಘಟಕವನ್ನು ಪ್ರಾರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಇಲ್ಲಿನ ಉದ್ಯಾನವನ ಸೇರಿದಂತೆ ಇತರೆ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಹಮ್ಮಿಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ವೀರಭದ್ರೇಶ್ವರ ದೇವಸ್ಥಾನಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಕ್ತರಿದ್ದು, ಶಿಂಗಟಾಲೂರು ವೀರಭದ್ರೇಶ್ವರ ಟ್ರಸ್ಟ್ ಕಮೀಟಿಗೆ ಕರಬಸಪ್ಪ ಹಂಚಿನಾಳ ಅವರು ಅಧ್ಯಕ್ಷರಾದ ನಂತರ ದೇವಸ್ಥಾನದ ಪೌಳಿ ನಿರ್ಮಾಣ, ಭಕ್ತರ ವಸತಿ ಕೊಠಡಿಗಳ ನಿರ್ಮಾಣ, ಶುದ್ಧಕುಡಿವ ನೀರು ಘಟಕ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಟ್ರಸ್ಟ್ ಕಮಿಟಿಯ ಎಲ್ಲ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ವೀರಭದ್ರೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿದರು.
ಇದೇ ಸಂದರ್ಭದಲ್ಲಿ ವೀರಣ್ಣ ತುರಮರಿ ಹಾಗೂ ನಿರ್ಮಲಾ ತುರಮರಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಅನಿತಾಕುಮಾರಿ ಅಂಬೂರಿ, ತಾಪಂ ಸದಸ್ಯ ಪಾಲಾಕ್ಷಗೌಡ ಪಾಟೀಲ, ರಾಮಾಂಜನೇಯರಾಜು ಪೆನ್‌ಮತ್ಸ, ಗಂಜಿಹಾಳ, ಶೇಖಪ್ಪ ಹೊಸೂರ, ಶ್ರೀಕಾಂತಯ್ಯ ಹಿರೇಮಠ, ಸೀತಾರಾಮರಾಜು, ಪಕ್ಕೀರಡ್ಡಿ ನೀರಲಗಿ, ಪರಮೇಶ್ವರಪ್ಪ ಬಾಗೇವಾಡಿ, ವೀರಣ್ಣ ಶೆಟ್ಟರ, ಕರಿಯಪ್ಪ ಹಡಗಲಿ, ದೊಡ್ಡನಿಂಗಪ್ಪ ಮಡೇಹೊಲದ, ಶಂಕರ ಹಳ್ಳಿಕೇರಿ ಉಪಸ್ಥಿತರಿದ್ದರು. ಉಮೇಶ ಬೂದಿಹಾಳ ನಿರೂಪಿಸಿದರು. ಎಸ್.ವಿ. ತಿಗರಿಮಠ ವಂದಿಸಿದರು.