ಮೂಲ ಸಂಸ್ಕೃತಿ ವಿಸ್ಮೃತಿಗೆ: ಬಂಡಿ ವಿಷಾದ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಜ. 15
ಮಹಿಳೆಯರು ಧಾರಾವಾಹಿಗಳಿಗೆ ಮಾರುಹೋಗಿ ನಮ್ಮ ಅಮೂಲ್ಯ ಸಂಸ್ಕೃತಿಯನ್ನು ಮರೆತು ಮುನ್ನಡೆಯುತ್ತಿದ್ದಾರೆ ಎಂದು ಸಂಯುಕ್ತಾ ಬಂಡಿ ವಿಷಾದಿಸಿದರು.
ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಲಿಂ. ಅನ್ನದಾನ ಮಹಾಸ್ವಾಮಿಗಳ ಪುಣ್ಯಾರಧನೆಯ ಶತಮಾನೋತ್ಸವ ಕಾರ್ಯಕ್ರಮದ ನಿಮಿತ್ತ 101 ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿರುವ ಶ್ರೀಮಠದ ಪ್ರಯತ್ನ ಶ್ಲಾಘನೀಯ. ಮಹಿಳೆಯರು ಮುತ್ತೈದೆತನದ ಪ್ರತೀಕವಾದ ಕುಂಕುಮ, ಹಸಿರು ಬಳೆ, ಹೂವು, ಕಾಲುಂಗರ, ತಾಳಿ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದರು.
ಖೇಡಗಿ ವಿರಕ್ತ ಮಠದ ಶಿವಬಸವರಾಜೇಂದ್ರ ಶ್ರೀಗಳು ಮಾತನಾಡಿ, ಮಹಿಳೆಯರು ತಮ್ಮ ಸಂಸ್ಕೃತಿಯನ್ನು ಮರೆಯದೇ ಉಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿರವಾಳದ ಜಗದೇವಿ ತಾಯಿಯವರ ದೇವಿ ಸ್ತುತಿಯೊಂದಿಗೆ ಉಡಿತುಂಬುವ ಕಾರ್ಯಕ್ರಮ ಪ್ರಾರಂಭವಾಯಿತು. ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ನರೇಗಲ್ಲನ ಮಹಿಳಾ ಸಿಬ್ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಸಾನ್ನಿಧ್ಯವನ್ನು ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಶಿವಬಸವ ಶ್ರೀಗಳು ವಹಿಸಿದ್ದರು. ಯಲಬುರ್ಗಾ ಹಿರೇಮಠದ ಬಸವಲಿಂಗ ಶಿವಾಚಾರ್ಯರು, ಹಾಲಕೇರಿ ಸಂಸ್ಥಾನಮಠದ ಶಿವಲಿಂಗ ದೇಶಿಕರು ಬನವಾಸಿ, ದರೂರಿನ ಕೊಟ್ಟೂರು ದೇಶಿಕರು, ಹಾಲಕೆರೆ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ದೇವರು ಉಪಸ್ಥಿತರಿದ್ದರು. ಅತಿಥಿಗಳಾಗಿ ಅನ್ನಪೂರ್ಣಮ್ಮ ಪಾಟೀಲ, ಸುಲೋಚನಾ ಸೊಪ್ಪಿಹಿರೇಮಠ, ಅಮ್ರಮ್ಮ ಬಳ್ಳಾರಿ, ವಿಜಯಲಕ್ಷ್ಮಿ ಪಾಟೀಲ, ಜಿಪಂ ಮಾಜಿ ಸದಸ್ಯೆ ರೇಣುಕಾ ಕುರಿ, ಹಾಲಕೆರೆ ಗ್ರಾಪಂ ಅಧ್ಯಕ್ಷೆ ಯಮನಮ್ಮ ಪೂಜಾರ ಆಗಮಿಸಿದ್ದರು. ಶಿಕ್ಷಕಿ ಪಿ.ಎಸ್. ಅಂಗಡಿ ನಿರೂಪಿಸಿ, ವಂದಿಸಿದರು.