ಗ್ರಾಮಾಭಿವೃದ್ಧಿಗೆ ಮೊದಲ ಆದ್ಯತೆ: ಸಿ.ಸಿ. ಪಾಟೀಲ್
ಕನ್ನಡಪ್ರಭ ವಾರ್ತೆ, ರೋಣ, ಜ. 21
ರಸ್ತೆ, ಶುದ್ಧ ಕುಡಿಯುವ ನೀರು, ಚರಂಡಿ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿ ಗ್ರಾಮಗಳ ಸರ್ವಾಂಗೀಣ ಅಭೃದ್ಧಿಗೆ ಮೊದಲ ಆದ್ಯತೆ ನೀಡಿ, ಅದರಂತೆ ಕಾರ್ಯ ಕೈಕೊಂಡಿದ್ದೇನೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಭಾನುವಾರ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವವೇರಿಸಿ ಬಳಿಕ ಜರುಗಿದ ಸಮಾರಂಭದಲ್ಲಿ ಮಾತನಾಡಿ, ಅಧಿಕಾರ ಬಂದಾಗ ಜನರ ಸೇವೆಯ ಗುರಿಯನ್ನು ಹೊಂದಬೇಕು. ಅದನ್ನು ಬಿಟ್ಟು ಅಧಿಕಾರದ ಬೆನ್ನತ್ತಬಾರದು. ಚುನಾಯಿತ ಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಅಭಿವೃದ್ಧಿಯ ಇತಿಹಾಸ ನಿರ್ಮಿಸುವ ಕಾರ್ಯಗಳನ್ನು ಮಾಡಬೇಕು. ಜನತೆಗೆ ಕೊಟ್ಟ ಮಾತನ್ನು ಈಡೆರಿಸುವ ಮನೋಭಾವ ಹೊಂದುವುದು ಮುಖ್ಯ ಎಂದರು.
60 ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಕಾಂಗ್ರೆಸ್ ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಮಾಡಿಕೊಂಡು ವಂಚಿಸಿದೆ. ನಾವು ಅಲ್ಪ ಅವಧಿಯಲ್ಲಿಯೇ ದಲಿತ ಕಾಲೋನಿಗಳ ಅಭಿವೃದ್ಧಿ ಮಾಡಿ ಮೆಚ್ಚುಗೆ ಪಡೆದಿದ್ದೇವೆ. ಮಲ್ಲಾಪೂರ ಗ್ರಾಮವನ್ನು ಸುವರ್ಣ ಗ್ರಾಮೋದಯದ ಯೋಜನೆಯಡಿ ರು. 91.50 ಲಕ್ಷ ಅನುದಾನದಲ್ಲಿ ಅಭಿವೃದ್ಧ ಪಡಿಸಲಾಗುವುದು. ಈಗಾಗಲೇ ಗ್ರಾಮಕ್ಕೆ ಸುಮಾರು ರು. 3.94 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ ರು. 1.80 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೇವರೆರಿಸಲಾಗಿದೆ. ಎಲ್ಲ ಕಾಮಗಾರಿಗಳನ್ನು ಕೆಲವೇ ದಿನದಲ್ಲಿ ಪ್ರಾರಂಭಿಸಲಾಗುವುದು. ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರು ಕಾಳಜಿ ವಹಿಸಬೇಕು ಎಂದು ಸೂಚಿಸಿದರು.
ಮಲ್ಲಾಪೂರದ ಶೇ. 60ರಷ್ಟು ರೈತರಿಗೆ ಅನೂಕೂಲವಾಗುವ ಮೇಲ್ಮಟ್ಟದ ಸಂಪರ್ಕ ಕಚ್ಚಾ ರಸ್ತೆಯನ್ನು ಅಭಿವೃದ್ಧಿಪಡಿಸಲು ರು. 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮವನ್ನು ರು. 12.50 ಕೋಟಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿಸಲಾಗಿದೆ ಎಂದರು.
ನಿಡಗುಂದಿಕೋಪ್ಪ ಶಿವಬಸವ ಶ್ರೀಗಳು ಸಾನ್ನಿದ್ಯ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಚನ್ನವ್ವ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಗ್ರಾಪಂ ಉಪಾಧ್ಯಕ್ಷ ರಮೇಶ ನಾಗಸಮುದ್ರ, ತಾಪಂ ಇಓ ಎಸ್.ಎಂ. ರುದ್ರಸ್ವಾಮಿ, ಜಗದೀಶ ಗಾರವಾಡ, ವೀರೂಪಾಕ್ಷಗೌಡ ಪಾಟೀಲ, ಸಂಗಮೇಶ ದಾನರಡ್ಡಿ, ಲಿಂಗರಾಜ ಪಾಟೀಲ, ದೇವಕ್ಕ ವಾಲ್ಮೀಕಿ, ಯಮನವ್ವ ಮಾದರ, ಬಸಪ್ಪ ಉಗಲಾಟದ, ವಿ.ಕೆ. ಸತ್ತಿಗೇರಿ, ಬಸವರಾಜ ಛಲವಾದಿ, ಜಗದಿಶ ಬ್ಯಾಡಗಿ, ಕಂಟೆಪ್ಪಗೌಡ ಕರಕನಗೌಡ್ರ ಮುಂತಾದವರು ಉಪಸ್ಥಿತರಿದ್ದರು. ಅಶೋಕ ಕುಲಕರ್ಣಿ ಪ್ರಸ್ತಾವಿಕ ಮಾತನಾಡಿದರು. ಮಹಾಂತೇಶ ನರಿಯವರ ನಿರೂಪಿಸಿ, ವಂದಿಸಿದರು.