ಜಿಲ್ಲೆಯ 3 ಶಾಸಕರು ರಾಜಿನಾಮೆ?
ಕನ್ನಡಪ್ರಭ ವಾರ್ತೆ, ಗದಗ, ಜ. 21
ಬಿಜೆಪಿಯಿಂದ ಸಿಡಿದು ಕೆಜೆಪಿ ಸ್ಥಾಪಿಸಿ, ರಾಜ್ಯ ಬಿಜೆಪಿ ನಾಯಕರಿಗೆ ಮಗ್ಗಲು ಮುಳ್ಳಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸರ್ಕಾರಕ್ಕೆ ನೀಡಿರುವ ಡೆಡ್ಲೈನ್ ಜ. 23 ಸಮೀಪಿಸುತ್ತಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಜೆಟ್ ಮಂಡಿಸುವ ನೈತಿಕ ಹಕ್ಕಿಲ್ಲ ಎನ್ನುತ್ತಿರುವ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ಸರ್ಕಾರದ ಪತನದ ಬಗ್ಗೆ ಹೇಳಿಕೆ ನೀಡುತ್ತಿದ್ದು, ಜ. 23ರ ಡೆಡ್ಲೈನ್ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ರಾಜ್ಯದಲ್ಲಿಯೇ ಹೆಚ್ಚು: ಉತ್ತರ ಕರ್ನಾಟಕದ ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಅತ್ಯಂತ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಜಿಲ್ಲೆಗಳಾಗಿದ್ದು, ಗದಗ ಜಿಲ್ಲೆಯ 4 ವಿಧಾನಸಭಾ ಮತಕ್ಷೇತ್ರದಲ್ಲಿನ 3 ಜನ ಹಾಲಿ ಶಾಸಕರು ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಒಂದೇ ಜಿಲ್ಲೆಯಿಂದ ಇಷ್ಟೊಂದು ಪ್ರಮಾಣದ ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿ ಕೆಜೆಪಿಯೊಂದಿಗೆ ಗುರುತಿಸಿಕೊಂಡಿದ್ದು ಗದಗನಲ್ಲಿ ಮಾತ್ರ. ಹಾಗಾಗಿ ರಾಜ್ಯ ರಾಜಕೀಯ ವಲಯದ ಚಿತ್ತ ಮತ್ತೆ ಗದಗನತ್ತವೇ ನೆಟ್ಟಿದೆ.
3 ಜನ ಶಾಸಕರು: ಕೆಜೆಪಿಯಲ್ಲಿ ಗುರುತಿಸಿಕೊಂಡಿರುವ ಗದಗ ಶಾಸಕ ಶ್ರೀಶೈಲಪ್ಪ ಬಿದರೂರ, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ನರಗುಂದ ಶಾಸಕ ಸಿ.ಸಿ. ಪಾಟೀಲ ಹಾವೇರಿ ಸಮಾವೇಶದಲ್ಲಿ ತಮ್ಮ ನಿಲುವು ಸ್ಪಷ್ಟ ಪಡಿಸಿದ್ದು, ಬಿಜೆಪಿ ಕೂಡಾ ಪಕ್ಷದಿಂದ ಹೊರಹೋಗುತ್ತಿರುವ ಶಾಸಕರಿಗೆ ಸೆಡ್ಡು ಹೊಡೆಯಲು ಈಗಾಗಲೇ ಸಮರ್ಥ ಅಭ್ಯರ್ಥಿಯ (ಅದೇ ಸಮುದಾಯದ) ಹುಡುಕಾಟ ನಡೆಸಿದೆ. ಇನ್ನು ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರರಿಗೆ ವಾಯವ್ಯ ರಸ್ತೆ ಸಾರಿಗೆಯ ಅಧ್ಯಕ್ಷ ಸ್ಥಾನವನ್ನು ನೀಡಿ, ಪಕ್ಷದಲ್ಲಿದ್ದರೆ ಮುಂದೆ ಅಧಿಕಾರ ದೊರೆಯುವ ಮುನ್ಸೂಚನೆ ನೀಡಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ನಿರ್ಮಾಣವಾಗಿದೆ.
ಬಿರುಸಿನ ಚರ್ಚೆ: ಒಂದೇ ಜಿಲ್ಲೆಯಿಂದ ಇಷ್ಟೊಂದು ಪ್ರಮಾಣದ ಶಾಸಕರು ಕೆಜೆಪಿಗೆ ಹೋಗುತ್ತಿರುವುದು ಗದಗ ಜಿಲ್ಲೆಯಲ್ಲಿ ಮಾತ್ರವಾಗಿದೆ. ಹಾಗಾಗಿ ಪಕ್ಷದ ಮುಖಂಡ ಧನಂಜಯಕುಮಾರ ಹಾಗೂ ಶಾಸಕ ಸುರೇಶಗೌಡ ಅವರು ಜ. 23ಕ್ಕೆ 22ಕ್ಕೂ ಹೆಚ್ಚು ಜನ ಶಾಸಕರು ರಾಜಿನಾಮೆ ಸಲ್ಲಿಸುವ ಮೂಲಕ ಸರ್ಕಾರ ಬಜೆಟ್ ಮಂಡಿಸುವುದು ಅಸಾಧ್ಯ ಎಂದು ಹೇಳುತ್ತಿದ್ದಾರೆ. ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಜಿಲ್ಲೆಯ 3ಜನ ಶಾಸಕರು ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಅವರೆಲ್ಲಾ ಜ. 23ರಂದು ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸುತ್ತಾರೆಯೇ ಎನ್ನುವುದು ಚರ್ಚೆಗೆ ಕಾರಣವಾಗಿದೆ.
ಅಭಿವೃದ್ಧಿಗೆ ಹಿನ್ನೆಡೆ: ಹಾವೇರಿ ಸಮಾವೇಶದಲ್ಲಿ ಬಹಿರಂಗವಾಗಿ ಗುರುತಿಸಿಕೊಂಡ ನಂತರ ಕೆಜೆಪಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಬಹುತೇಕ ಶಾಸಕರು ಕೆಜೆಪಿ ಸೇರ್ಪಡೆಯಿಂದ ಹಿಂದೆ ಸರಿಯುತ್ತಿದ್ದು, ಜಿಲ್ಲೆಯ 3ಜನ ಶಾಸಕರು ಅಂದು ರಾಜಿನಾಮೆ ಸಲ್ಲಿಸುವರೇ ಎನ್ನುವ ಜಿಜ್ಞಾಸೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಸರ್ಕಾರದ ಅವಧಿ ಪೂರ್ಣಗೊಳ್ಳುವ ಸಮಯ ಹತ್ತಿರದಲ್ಲಿಯೇ ಇದ್ದರೂ ಸರ್ಕಾರ ಬಜೆಟ್ ಮಂಡಿಸುತ್ತೇವೆ ಎನ್ನುವ ಆತ್ಮವಿಶ್ವಾಸ ವ್ಯಕ್ತ ಪಡಿಸುತ್ತಿರುವುದು ಕೆಜೆಪಿ ಸೇರ್ಪಡೆಯಾಗುವ ಹಾಗೂ ರಾಜಿನಾಮೆ ಸಲ್ಲಿಸುವ ಶಾಸಕರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಬಜೆಟ್ವರೆಗೂ ಸರ್ಕಾರ ಮುಂದುವರಿದಲ್ಲಿ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ. ಆದರೆ, ಶಾಸಕರು ಜ. 23ರಂದು ರಾಜಿನಾಮೆ ಸಲ್ಲಿಸಿದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಹಿನ್ನೆಡೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ನಿಖರವಾಗಿ ಹೇಳುತ್ತಿಲ್ಲ: ಈ ವಿಷಯವಾಗಿ ಜಿಲ್ಲೆಯ 3ಜನ ಶಾಸಕರನ್ನು ಸಂಪರ್ಕಿಸಿದರೂ ಈ ಬಗ್ಗೆ (ಜ. 23) ಅಲ್ಲಿ ಪಾಲ್ಗೊಳ್ಳುವುದು, ರಾಜಿನಾಮೆ ಸಲ್ಲಿಸುವ ವಿಷಯವಾಗಿ ಯಾವುದೇ ಸ್ಪಷ್ಟ ನಿರ್ಧಾರ ತಿಳಿಸುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.