ಅರ್ಹ ಫಲಾನುಭವಿಗಳಿಗೆ ನಿವೇಶನ: ಸಚಿವ ಬಂಡಿ
ನರೇಗಲ್ಲ: ಪಪಂ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಈ ಆಶ್ರಯ ಬಡಾವಣೆಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ದೊರೆಯದಿದ್ದರೆ ಅವರಿಗೂ ಕೂಡ ಮುಂದಿನ ದಿನಗಳಲ್ಲಿ 50 ಎಕರೆ ಜಮೀನು ಖರೀದಿಸಿ, ಅದರಲ್ಲಿ ನಿರ್ಮಾಣ ಮಾಡಿಕೊಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಭರವಸೆ ನೀಡಿದರು.
ಅವರು ಸಮೀಪದ ದ್ಯಾಂಪೂರ ರಸ್ತೆಯಲ್ಲಿರುವ ಆಶ್ರಯ ಬಡಾವಣೆಯಲ್ಲಿ ಪಪಂ ವತಿಯಿಂದ ಮಂಜೂರಾದ ಆಶ್ರಯ ಬಡಾವಣೆಯ ನಿವೇಶನಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಮನೆಗಳ ಹಂಚಿಕೆಯಲ್ಲಿ ವ್ಯತ್ಯಾಸವಾಗಿರಬಹುದು. ಆದರೆ ಅವುಗಳನ್ನು ಸರಿಪಡಿಸಿ ಇನ್ನೂ ಅವಶ್ಯವಿರುವ ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡುತ್ತೇನೆ ಎಂದರು.
ನರೇಗಲ್ಲನ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ ನರೇಗಲ್ಲ ಪಟ್ಟಣಕ್ಕೆ ರು. 22 ಕೋಟಿ 42ಲಕ್ಷದಲ್ಲಿ ಈ ಯೋಜನೆ ಮಂಜೂರು ಮಾಡಿಸಿದ್ದೇನೆ. ಈ ಸಾರಿ 1246 ಮನೆಗಳನ್ನು ನರೇಗಲ್ಲ ಪಪಂಗೆ, 1300 ಮನೆಗಳನ್ನು ಗಜೇಂದ್ರಗಡ ಪುರಸಭೆಗೆ ಮಂಜೂರು ಮಾಡಿಸಿದ್ದು, ಇಂತಹ ಕಾರ್ಯವನ್ನು ಹಿಂದಿನ ಸರ್ಕಾರಗಳು ಮಾಡಿದ ಉದಾಹರಣೆ ನೀಡಿದಲ್ಲಿ ನಾನು ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ ಎಂದರು.
ನನ್ನ ಅಧಿಕಾರಾವಧಿಯಲ್ಲಿ ನರೇಗಲ್ಲ ಪಟ್ಟಣದ ರಸ್ತೆಗಳ ಹಾಗೂ ಇತರ ಕಾಮಗಾರಿಗಳ ಅಭಿವೃದ್ಧಿಗೆ ರು. 20 ಕೋಟಿಗೂ ಅಧಿಕ ಅನುದಾನ ಒದಗಿಸಿಕೊಟ್ಟಿದ್ದೇನೆ. ಸಮೀಪದ ಜಿಗಳೂರು ಗ್ರಾಮ, ನರೇಗಲ್ಲ, ರೋಣ ಹಾಗೂ ಗಜೇಂದ್ರಗಡ ಪಟ್ಟಣಗಳ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ರು. 79.80 ಕೋಟಿ ವೆಚ್ಚದಲ್ಲಿ ಮಲಪ್ರಭಾ ನದಿ ನೀರು ಬಳಸಿ, ಸುಮಾರು 350 ಎಕರೆಯಲ್ಲಿ ಕೆರೆ ನಿರ್ಮಾಣ ಮಾಡುವ ಯೋಜನೆ ಕಾರ್ಯರೂಪದಲ್ಲಿದೆ ಎಂದು ತಿಳಿಸಿದರು.
ಪಪಂ ಸದಸ್ಯ ಸಂಜೀವ ಕುಲಕರ್ಣಿ ಮಾತನಾಡಿದರು. ಪಪಂ ಅಧ್ಯಕ್ಷೆ ವಾಸಂತವ್ವ ಹುಲಕೋಟಿ, ಉಪಾಧ್ಯಕ್ಷೆ ಗುರುಸಿದ್ದವ್ವ ಕುಂಬಾರ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಲಿಂಗನಗೌಡ್ರ, ಇನಾಮದಾರ, ಗ್ರಾಮಪುರೋಹಿತ, ಪಪಂನ ಅಭಿಯಂತರ ಪಿ.ಪಿ. ಕಾಟೇವಾಲೆ, ಆರ್.ಜಿ.ಪಾಟೀಲ, ಶಾಂತವ್ವ ಕೋರಧಾನ್ಯಮಠ ಹಾಗೂ ಪಪಂ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಪಪಂ ಮುಖ್ಯಾಧಿಕಾರಿ ಐ.ಕೆ. ಗುಡದಾರಿ ಸ್ವಾಗತಿಸಿದರು. ಶಿಕ್ಷಕ ಗಾಣಿಗೇರ ನಿರೂಪಿಸಿ, ವಂದಿಸಿದರು.