ವ್ಯಕ್ತಿಗಿಂತ ಪಕ್ಷ ದೊಡ್ಡದು: ಸಚಿವ ಬಂಡಿ
ರೋಣ: ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಇದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಅವರು ಭಾನುವಾರ ತಾಲೂಕಿನ ಸವಡಿ ಗ್ರಾಮದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ಕರ್ನಾಟಕ ರೂರಲ್ ಇನ್‌ಪ್ರಾಸ್ಟ್ರಕ್ಚರ್ ಡೆವಲಪಮೆಂಟ್ ಲಿಮಿಟೆಡ್ (ಭೂಸೇನಾ ನಿಗಮ) ರು. 22 ಲಕ್ಷದಲ್ಲಿ ನಿರ್ಮಿಸಿದ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ರಸ್ತೆ ಅಭಿವೃದ್ಧಿಗೆ ರು. 200 ಕೋಟಿ, ಕುಡಿವ ನೀರಿನ ಯೋಜನೆಗೆ ರು. 200 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಸವಡಿಯಲ್ಲಿ ರು. 1.45 ಕೋಟಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಕೆಜೆಪಿ ದಿವಾಳಿ: ಬಿ.ಎಸ್. ಯಡಿಯೂರಪ್ಪನವರು ಕಟ್ಟಿದ ಪಕ್ಷವು ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿದೆ. ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ಸಿದ್ಧಾಂತವಿಲ್ಲ. ಕೇವಲ ಅಧಿಕಾರದ ಆಸೆಗಾಗಿ ಹುಟ್ಟಿರುವಂತವು. ಅವುಗಳು ಕೆಲವೇ ದಿನಗಳಲ್ಲಿ ಅವನತಿಯ ಹಾದಿ ಹಿಡಿಯುತ್ತವೆ ಎಂದರು. ಗ್ರಾಮದಲ್ಲಿ ರು. 1.30 ಕೋಟಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಬ್ರಹ್ಮದೇವರ ಗುಡಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಬಿಜೆಪಿ ಮುಖಂಡ ಅಶೋಕ ನವಲಗುಂದ ಮಾತನಾಡಿದರು. ಗ್ರಾಪಂ ಅಧ್ಯಕ್ಷ ವೀರಪ್ಪ ಪರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಸದಸ್ಯೆ ಸುಮಂಗಲಾ ಹಿರೇಮಠ, ತಾಪಂ ಇಓ ಎಸ್.ಎಂ. ರುದ್ರಸ್ವಾಮಿ, ಐ.ಎಸ್. ಶಿಲವಂತರ, ಅಶೋಕ ಪವಾಡಶೆಟ್ಟರ, ಗುರುರಾಜ ಕುಲಕರ್ಣಿ, ಬಸವಂತಪ್ಪ ತಳವಾರ, ಡಾ. ಆನಂದ ಇನಾಮದಾರ, ಶರಣಯ್ಯ ಹಿರೇಮಠ, ಗ್ರಾಪಂ ಉಪಾಧ್ಯಕ್ಷೆ ಶಕುಂತಲಾ ಜಕ್ಕಲಿ, ಪಿಡಿಓ ಸತೀಶ ಗುರನಗೌಡ ಉಪಸ್ಥಿತರಿದ್ದರು. ಶ್ರೀಶೈಲ ಇಟಗಿ ನಿರೂಪಿಸಿದರು.