ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ

Mainashree
Updated On : 23 Jan 2013, 11:11 am

ಕನ್ನಡಪ್ರಭ ವಾರ್ತೆ, ನರಗುಂದ, ಜ. 22
ರಾಜ್ಯದ ಮೂಲೆ ಮೂಲೆಗೆ ಪ್ರವಾಸ ಮಾಡಿ 40 ವರ್ಷ ಕಾಲ ಪಕ್ಷ ಸಂಘಟನೆ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಬೆಂಬಲಗರ ಮೇಲೆ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ನೇಕಾರ ಸಂಘದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಆರೋಪಿಸಿದರು.
ಸೋಮವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50 ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಕಂಡೆವು. ರೈತರಿಗೆ ಉಚಿತ ಬೆಳೆಸಾಲ, ಭಾಗ್ಯಲಕ್ಷ್ಮಿ ಯೋಜನೆ, ವಿಧವಾ, ವೃದ್ಧಾಪ್ಯ ವೇತನ, ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ, ಸಾವಯುವ ಕೃಷಿಗೆ ಆದ್ಯತೆ ನೀಡಿ, ಮಾದರಿ ರಾಜ್ಯ ಮಾಡುವ ಪಣತೊಟ್ಟ ನಾಯಕನಿಗೆ ಬಿಜೆಪಿಯವರೇ ಮೋಸ ಮಾಡಿ ಅಧಿಕಾರದಿಂದ ಕೆಳಗಿಳಿಸಿದರು ಎಂದು ದೂರಿದರು.
ಯಡಿಯೂರಪ್ಪ ಬೆಂಬಲಿಗರಿಗೆ ಕಿರಿಕಿರಿ ನೀಡಿ, ಅವರ ಹುದ್ದೆಗಳನ್ನು ಕಸಿದುಕೊಂಡು ಸೇಡಿನ ರಾಜಕಾರಣ ಮಾಡಿದ ಬಿಜೆಪಿಯವರಿಗೆ ಕೆಜೆಪಿ ಮೂಲಕ ತಕ್ಕ ಪಾಠ ಕಲಿಸುತ್ತೇವೆ. ಈ ಬಾರಿ ಕೆಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದರು.
ನೇಕಾರ ಸಮಾಜಕ್ಕೆ ದೊಡ್ಡ ಕೊಡುಗೆ
ರಾಜ್ಯದಲ್ಲಿ ಅಂದಾಜು 60 ಲಕ್ಷ ಜನಸಂಖ್ಯೆ ಹೊಂದಿರುವ ನೇಕಾರ ಸಮಾಜದಲ್ಲಿ 26 ಒಳಪಂಗಡಗಳಿದ್ದವು. ಅವುಗಳನ್ನು ಒಗ್ಗೂಡಿಸಬೇಕೆಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಲ್ಲಿ ಕೇಳಿಕೊಂಡಾಗ ತಕ್ಷಣ ಒಪ್ಪಿ, ಸಮಾಜ ಸಂಘಟನೆ ಹಾಗೂ ಅಭಿವೃದ್ಧಿಗೆ ರು. 60 ಕೋಟಿ ಬಿಡುಗಡೆ ಮಾಡಿದರು. ರಾಜ್ಯದಲ್ಲಿ 403 ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಮುಂದೆ ಉಳಿದೆಡೆಯೂ ನಿರ್ಮಿಸಲಾಗುವುದು ಎಂದರು.
ಶಾಸಕ ಸಿ.ಸಿ. ಪಾಟೀಲ, ಸವದತ್ತಿ ಮಾಜಿ ಶಾಸಕ ರಾಜಣ್ಣ ಮಾಮನಿ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಸದಸ್ಯ ಎಸ್.ಬಿ. ಕರಿಗೌಡರ, ರಾಜಗೌಡ ಪಾಟೀಲ, ಉಮೇಶ ಯಳ್ಳೂರ, ಮಹೇಶ ಪಾಟೀಲ, ಬಿ.ಕೆ. ಗುಜಮಾಗಡಿ, ನೇಕಾರ ಸ್ವಕುಳಸಾಳಿ ಸಮಾಜದ ರಾಜ್ಯಾಧ್ಯಕ್ಷ ಚಂದ್ರಕಾಂತ ಭಂಡಾರಿ, ವಿವೇಕಾನಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement