ದೊಡ್ಡಮೇಟಿ ಸ್ಮಾರಕ ನಿರ್ಮಾಣವಾಗಲಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಜ. 23
ಜಕ್ಕಲಿ ಗ್ರಾಮದ ಧೀಮಂತ ಹೋರಾಟಗಾರ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಬೃಹತ್ ಸ್ಮಾರಕ ನಿರ್ಮಾಣವಾಗಬೇಕು. ಅಂದಾಗ ಮಾತ್ರ ಅವರಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದು ಡಂಬಳ-ಗದಗ ಸಂಸ್ಥಾನ ಮಠದ ಡಾ. ತೋಂಟದ ಸಿದ್ದಲಿಂಗ ಶ್ರೀಗಳು ಅಭಿಪ್ರಾಯಪಟ್ಟರು.
ಈಚೆಗೆ ಅವರು ಸಮೀಪದ ಜಕ್ಕಲಿ ಗ್ರಾಮದಲ್ಲಿ ನಡೆದ ಸುವರ್ಣ ಗ್ರಾಮೋದಯ ಯೋಜನೆಯಡಿ ನಿರ್ಮಾಣವಾದ ಜ. ತೋಂಟದಾರ್ಯ ಸಮುದಾಯ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮುಂಬೈ ಅಧಿವೇಶನದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಭಾಷಣ ಮಾಡಿದ ಕೀರ್ತಿ ಅಂದಾನಪ್ಪ ದೊಡ್ಡಮೇಟಿ ಅವರಿಗೆ ಸಲ್ಲುತ್ತದೆ. ಆ ಮೂಲಕ ದೊಡ್ಡಮೇಟಿ ಪ್ರಾದೇಶಿಕ ಭಾಷೆಗೆ ಮನ್ನಣೆ ತಂದುಕೊಟ್ಟರು ಎಂದು ಸ್ಮರಿಸಿದರು.
ಸಮುದಾಯ ಭವನ ಮಠದ ಆಸ್ತಿಯಾಗಿದ್ದರೂ ಅದನ್ನು ಗ್ರಾಪಂಗೆ ನೀಡಲಾಗಿದೆ. 2008-09ರಲ್ಲಿ ಸರ್ಕಾರದಿಂದ ಸುಮಾರು # 20 ಲಕ್ಷ ಅನುದಾನ ಪಡೆಯಲಾಗಿದೆ ಎಂದು ಶ್ರೀಗಳು ಹೇಳಿದರು.
ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಮೇಟಿ ಮಾತನಾಡಿ, ನಮ್ಮ ಗ್ರಾಮದಲ್ಲಿ ನಿರ್ಮಿಸಿರುವ ಈ ಕಟ್ಟಡದ ನಿರ್ವಹಣೆ ಜವಾಬ್ದಾರಿ ನಮ್ಮದು. ಇದನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಗ್ರಾಮಸ್ಥರ ಸಹಾಯದಿಂದ ಈ ಸಮುದಾಯ ಭವನಕ್ಕೆ ಒಂದು ಕಾಂಪೌಂಡ್ ಗೋಡೆ ನಿರ್ಮಿಸಿಕೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಸಮುದಾಯಭವನ ಉದ್ಘಾಟಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ರೋಣ ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಸದಸ್ಯೆ ಮಾಲಾನಬಿ ಗಡಾದ, ಗ್ರಾಪಂ ಉಪಾಧ್ಯಕ್ಷೆ ಭುವನೇಶ್ವರಿ ಪಲ್ಲೇದ, ಸದಸ್ಯ ಅಂದಪ್ಪ ಮಾದರ, ಹುಚ್ಚುಸಾಬ ಬಸಾಪುರ, ಅನ್ನಪೂರ್ಣಾ ರೋಣದ, ಪ್ರೇಮಾ ಗಾಣಿಗೇರ, ರೋಣ ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ರುದ್ರಸ್ವಾಮಿ, ಶೇಖಪ್ಪ ಕೋರಿ ಉಪಸ್ಥಿತರಿದ್ದರು.
ಮುತ್ತು ಕಡಗದ ಸ್ವಾಗತಿಸಿದರು. ಚನ್ನಬಸವರಾಜ ಕೊಪ್ಪದ ಕಾರ್ಯಕ್ರಮ ನಿರೂಪಿಸಿದರು. ಪಿಡಿಓ ಎಸ್.ಎಸ್. ಬೆಂಕಿ ವಂದಿಸಿದರು.