ಶಿರಹಟ್ಟಿ: ಇಂದಿನಿಂದ ದ್ಯಾಮವ್ವ ದೇವಿ ಜಾತ್ರೆ (ಸುದ್ದಿ ಸಂಕ್ಷೇಪ)
ಶಿರಹಟ್ಟಿ: ಗ್ರಾಮ ದೇವತೆ ದ್ಯಾಮವ್ವ ದೇವಿಯ ದ್ವಿತೀಯ ಜಾತ್ರಾ ಮಹೋತ್ಸವ ಜ. 25 ರಿಂದ 27ರವರೆಗೆ ನಡೆಯಲಿದೆ. ಜ. 25 ರಂದು ಬೆಳಗ್ಗೆ 6.47ಕ್ಕೆ ದೇವಿಗೆ ಉಡಿ ತುಂಬುವುದು. 9ಕ್ಕೆ ಚೌತಮನಿ ಕಟ್ಟಿಯಿಂದ ಹೊರಟು ದೇವಿಯ ಗ್ರಾಮ ಸಂಚಾರ, ಸಂಜೆ 5ಕ್ಕೆ ದೇವಿ ಕಥಾಪುರಾಣ ಹಾಗೂ 7.30ಕ್ಕೆ ಖ್ಯಾತ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರಿಂದ ನಗೆ ಹಬ್ಬ ಕಾರ್ಯಕ್ರಮ ಜರುಗಲಿದೆ. ಜ. 26ರಂದು ಬೆಳಗ್ಗೆ 6.47ಕ್ಕೆ ದೇವಿಗೆ ಉಡಿ ತುಂಬುವುದು. ನಂತರ 9 ರಿಂದ ಸಂಜೆ 5 ರವರೆಗೆ ದೇವಿಯ ಗ್ರಾಮ ಸಂಚಾರ, ಸಂಜೆ 7.30ಕ್ಕೆ ಶರಣು ಯಮನೂರ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ. ಜ. 27ರಂದು ಬೆಳಗ್ಗೆ 6.40ಕ್ಕೆ ಉಡಿ ತುಂಬುವುದು. 8ಕ್ಕೆ ಗ್ರಾಮದೇವತಾ ಮಂದಿರದಲ್ಲಿ ದುರ್ಗಾ ಹೋಮ, 9ಕ್ಕೆ ಗಜರಾಜ ಮತ್ತು ಸಕಲ ವಾದ್ಯಮೇಳಗಳೊಂದಿಗೆ ದೇವಿಯ ವಿಗ್ರಹ ಮೆರವಣಿಗೆ ಮೂಲಕ ಕರೆ ತಂದು ಮಂದಿರದ ಮುಂದಿನ ಮಂಟಪದಲ್ಲಿ ಪ್ರತಿಷ್ಠಾಪಿಸುವುದು. ಮಧ್ಯಾಹ್ನ 1.26ಕ್ಕೆ ಮಹಾಪೂಜೆ, ನೈವೇದ್ಯ ಸಮರ್ಪಣೆ, ಉಡಿ ತುಂಬುವ ಕಾರ್ಯಕ್ರಮವಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಶಹಪೂರಪೇಟೆ, ಡಿ.ಸಿ. ಮಿಲ್ ರೋಡ್, ಮಹೇಂದ್ರಕರ್ ಸರ್ಕಲ್, ಕಮ್ಮಾರ ಸಾಲು, ಹಳೇ ಬಸ್ ಸ್ಟ್ಯಾಂಡ್ ರೋಡ್, ವಕಾರ ಸಾಲ ಈ ಭಾಗಗಳಲ್ಲಿ ಶುಕ್ರವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಇಂದು ಸ್ವರನಮನ ಕಾರ್ಯಕ್ರಮ
ರೋಣ: ಪಟ್ಟಣದ ಡಾ. ಭೀಮಸೇನ ಜೋಶಿ ಸ್ಮರಣೋತ್ಸವ ಟ್ರಸ್ಟ್ ಕಮಿಟಿ ಇವರುಗಳ ಆಶ್ರಯದಲ್ಲಿ ಭಾರತ ರತ್ನ ಪಂಡಿತ ಡಾ. ಭೀಮಸೇನ ಜೋಶಿಯವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಖ್ಯಾತ ಹಿಂದುಸ್ಥಾನಿ ಸಂಗೀತ ಗಾಯಕ ಪಂಡಿತ ಕೃಷ್ಣೇಂದ್ರ ವಾಡಿಕರ ಇವರಿಂದ ಜ. 25 ರಂದು ಸಂಜೆ 5ಕ್ಕೆ ಪಟ್ಟಣದ ಗುಲಗಂಜಿ ಮಠದಲ್ಲಿ ಸ್ವರನಮನ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಶ್ರೀಗಳು, ಅಧ್ಯಕ್ಷತೆಯನ್ನು ಮಾಜಿ ಸಂಸದ ಆರ್.ಎಸ್. ಪಾಟೀಲ ವಹಿಸುವರು. ಪುರಸಭೆ ಉಪಾಧ್ಯಕ್ಷ ಎಚ್.ಬಿ. ನವಲಗುಂದ, ಡಾ. ಎಲ್.ಆರ್. ರಡ್ಡೇರ, ಟಿ.ವಿ. ಕುಲಕರ್ಣಿ ಮುಂತಾದವರು ಉಪಸ್ಥಿತರಿರುವರು ಎಂದು ಡಾ. ಭೀಮಸೇನ ಜೋಶಿ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಆರ್.ಎನ್. ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ. 18ರಂದು ಸಾಮೂಹಿಕ ವಿವಾಹ
ರೋಣ: ಮಾಜಿ ಶಾಸಕ ಜಿ.ಎಸ್. ಪಾಟೀಲ್ ಅಭಿಮಾನಿ ಬಳಗ ಹಾಗೂ ಈಶ್ವರ ವಿಶ್ವಕರ್ಮ ಸ್ನೇಹಿತ ಕೂಟ ಇವರುಗಳ ಆಶ್ರಯದಲ್ಲಿ ಕಾಳಿಕಾದೇವಿ ಜಾತ್ರಾಮಹೋತ್ಸವ ಅಂಗವಾಗಿ ಫೆ. 18ರಂದು ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಧು-ವರರಿಗೆ ತಾಳಿ, ಕಾಲುಂಗುರ, ಮೂಹರ್ತದ ಬಟ್ಟೆ, ಸರ್ಕಾರದಿಂದ ರು. 10 ಸಾವಿರ ಉಚಿತವಾಗಿ ಕೊಡಲಾಗುವುದು. ಹೆಸರು ನೊಂದಾಯಿಸುವವರು ಫೆ. 10ರೊಳಗೆ ಕಾಳೇಶ ಪೋತದಾರ ಮೊ. 9901135045, ರಾಮು ಪತ್ತಾರ-9901748071, ವಿಷ್ಣು ಕಮ್ಮಾರ-9480614641 ಈಶ್ವರ ಪತ್ತಾರ ಇವರನ್ನು ಸಂಪರ್ಕಿಸಬೇಕೆಂದು ವಿಶ್ವಕರ್ಮ ಸೇವಾ ಟ್ರಸ್ಟ್ ಕಮಿಟಿ ಪ್ರಧಾನ ಕಾರ್ಯದರ್ಶಿ ರುದ್ರೇಶ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
27ರಂದು ಶಿವಾನುಭವ
ಮುಂಡರಗಿ: ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ 1338ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಜ. 27ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಜ. ಡಾ ಅನ್ನದಾನೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ರಾಜ್ಯ ಪ್ರಶಸ್ತಿ ವಿಜೇತ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಗವಾಯಿಗಳು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.