ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮರ್ಪಕ ಕುಡಿಯುವ ನೀರು ಪೂರೈಸಿ

Mainashree
Updated On : 25 Jan 2013, 11:00 am

ಗದಗ: ಕಳೆದ ಕೆಲವು ದಿನಗಳಿಂದ 25-28 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ವಾರಕ್ಕೊಮ್ಮೆಯಾದರೂ ಅವಳಿ ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆ ಸದಸ್ಯರು ಆಗ್ರಹಿಸಿದರು.
ಗುರುವಾರ ಸಂಜೆ ಗದಗ-ಬೆಟಗೇರಿ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಅವರಿಗೆ ಸದಸ್ಯರು ನೀರಿನ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿದರು. ವಿರೋಧ ಪಕ್ಷದ ನಾಯಕ ಎಂ.ಎಂ. ಹಿರೇಮಠ ಮಾತನಾಡಿ, ಗದಗ-ಬೆಟಗೇರಿ ಅವಳಿ ನಗರಕ್ಕೆ ಸುಮಾರು 12 ಎಂಎಲ್‌ಡಿ ನೀರು ಬೇಕಾಗಿದ್ದು, ಆದರೆ ಇಂದು ಕೇವಲ 6ರಿಂದ 7 ಎಂಎಲ್‌ಡಿ ನೀರು ತುಂಗಭದ್ರಾ ಜಲಾಶಯದಿಂದ ಪೂರೈಕೆಯಾಗುತ್ತಿದೆ. ಅದರಲ್ಲಿಯೇ ಮಾರ್ಗ ಮಧ್ಯ ನೀರು ಪೋಲಾಗುತ್ತಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ನೀರು ಪೂರೈಕೆಯಾಗದೇ ಇರುವ ವಾರ್ಡ್‌ಗಳನ್ನು ಗುರುತಿಸಿ, ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ತಿಳಿಸಿದರು.
ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿವ ನೀರು ಸರಬರಾಜು ಮಾಡುವ ತುಂಗಭದ್ರಾ ನದಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಮುಂಬರುವ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ನದಿಯಲ್ಲಿ ಉಸುಕಿನ ಚೀಲಗಳ ತಡಗೋಡೆ ನಿರ್ಮಿಸಲು ಜಲಮಂಡಳಿಯವರು ರು. 30.36 ಲಕ್ಷ ಭರಣ ಮಾಡುವ ಕುರಿತು ಒಪ್ಪಿಗೆ ಸೂಚಿಸಿದ್ದು, ಆದರೆ ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಾಧವ ಗಣಾಚಾರಿ ಮಾತನಾಡಿ, ಮುಂಡರಗಿಯ ಕೊರ್ಲಹಳ್ಳಿ ಬಳಿಯಿರುವ ತುಂಗಭದ್ರಾ ನದಿಯಲ್ಲಿ ಉಸುಕಿನ ಚೀಲಗಳ ತಡೆಗೋಡೆ ನಿರ್ಮಿಸದೇ ಬೃಹತ್ ಗುಂಡಿಯನ್ನು ತೋಡಿ ಶಾಶ್ವತವಾಗಿ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಿಬ್ಬಂದಿ ವಜಾಕ್ಕೆ ಆಗ್ರಹ: ನಗರಸಭೆಯ ಸಿಬ್ಬಂದಿ ಗಣಾಚಾರಿ ಹಾಗೂ ಹುಣಸಿಮರದ ಎಂಬುವವರು ಸರಿಯಾಗಿ ಕೆಲಸ ಕೈಗೊಳ್ಳದೇ ಇರುವುದರಿಂದ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿದ್ದು, ಕೂಡಲೇ ಇವರಿಬ್ಬರನ್ನು ಕೆಲಸದಿಂದ ವಜಾ ಮಾಡುವಂತೆ ಸದಸ್ಯರು ಅಧ್ಯಕ್ಷರಿಗೆ ಸೂಚಿಸಿದರು. ವಿಷಯ ಆಲಿಸಿದ ಅಧ್ಯಕ್ಷ ಶಿವಣ್ಣ ಮುಳಗುಂದ ಈ ಕುರಿತು ಠರಾವು ಮಾಡಿ, ಇವರಿಬ್ಬರನ್ನು ವಜಾ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಮಾತಿನ ಚಕಮಕಿ: ಕೆ.ಎಚ್. ಪಾಟೀಲ ಪ್ರತಿಷ್ಠಾನವು ನಗರದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಸಾರ್ವಜನಿಕರಿಗೆ ಶುದ್ಧ ಕುಡಿವ ನೀರು ಪೂರೈಸುತ್ತಿದ್ದು, ಇದರಿಂದ ಜನತೆ ನಿರಾಳವಾಗಿ ಜೀವನ ನಡೆಸುವಂತಾಗಿದೆ ಎಂದು ನಗರಸಭೆ ಸದಸ್ಯ ಪ್ರಕಾಶ ಬಾಕಳೆ ಹೇಳುತ್ತಿದ್ದಂತೆಯೇ ಸದಸ್ಯ ಮಾಧವ ಗಣಾಚಾರಿ ಆಕ್ರೋಶಗೊಂಡು ಕೆ.ಎಚ್. ಪಾಟೀಲ ಪ್ರತಿಷ್ಠಾನದ ಹೆಸರನ್ನು ಬೆಳೆಸುವ ಉದ್ದೇಶದಿಂದಲೇ ನಗರದಲ್ಲಿ ನೀರು ಪೂರೈಕೆಯಲ್ಲಿ ವಿಳಂಬಮಾಡಲಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಸರ್ಕಾರವು ದಿವಾಳಿ ಹಿಡಿದಿದೆ ಎನ್ನುತ್ತಿದ್ದಂತೆಯೇ ಕೆಲವು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಹಿರೇಮಠ ಮಾತನಾಡಿ, 20 ವರ್ಷಗಳವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್ ನಗರದ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ. ಆದರೆ, ಅಧಿಕಾರ ವಹಿಸಿಕೊಂಡ 5 ವರ್ಷದಲ್ಲಿ ಬಿಜೆಪಿಯು 2ನೇ ಹಂತದ ಕುಡಿವ ನೀರಿಗಾಗಿ ರು. 91ಕೋಟಿ, 24್ಢ7 ಕುಡಿವ ನೀರು ಪೂರೈಕೆಗೆ ರು. 13 ಕೋಟಿ ಬಿಡುಗಡೆ ಮಾಡಿದೆ ಎಂದರು. ಇದರಿಂದ ಕೆಲಕಾಲ ಮಾತಿನ ಚಕಮಕಿ ಜರುಗಿ 10 ನಿಮಿಷದ ವರೆಗೆ ಸಭೆಯನ್ನು ಮುಂದೂಡಲಾಯಿತು.
ನಂತರ ಬೆಟಗೇರಿಯಲ್ಲಿ ಬಸ್ ನಿಲ್ದಾಣಕ್ಕಾಗಿ ಕಾಯಿಪಲ್ಲೆ ಮಾರುಕಟ್ಟೆಯನ್ನು ಬೆಟಗೇರಿ ಬಸ್ ನಿಲ್ದಾಣಕ್ಕೆ ನೀಡುವಂತೆ ನಗರಸಭೆ ಮಾಲ್ಕಿ 54 ವಕಾರಗಳ ಭೂಬಾಡೆದಾರರು ನೀಡಿದ ಮನವಿಯ ಕುರಿತು ಪರಿಶೀಲನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಖಮರಸುಲ್ತಾನ ನಮಾಜಿ, ಸದಸ್ಯೆ ವಂದನಾ ವರ್ಣೇಕರೆ, ಪೀರಸಾಬ ಕೌತಾಳ, ಮಾಣಿಶ್ರೀ ಮಾದಗುಂಡಿ ಸೇರಿದಂತೆ ನಗರಸಭೆ ಸದಸ್ಯರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement