ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಿ: ಎಚ್ಕೆ

Mainashree
Updated On : 26 Jan 2013, 10:57 am

ಕನ್ನಡಪ್ರಭ ವಾರ್ತೆ, ಗದಗ, ಜ. 25
ಪ್ರತಿಯೊಬ್ಬರು ಜೀವನದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಭ್ರಾತೃತ್ವ ಹಾಗೂ ಶಾಂತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಶುಕ್ರವಾರ ಸಂಜೆ ನಗರದ ಈದ್ ಮಿಲಾದ್ ಕಮಿಟಿ ವತಿಯಿಂದ ಹಳೆ ಬಸ್ ನಿಲ್ದಾಣ ಹತ್ತಿರದ ಸರ್ಕಾರಿ ಉರ್ದು ಶಾಲೆ ನಂ. 2ರಲ್ಲಿ ಜರುಗಿದ ಹಜರತ್ ಮಹಮದ್ ಪೈಗಂಬರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಸ್ಪರ ಪ್ರೀತಿ- ಸೌಹಾರ್ದದಿಂದ ಸಂಬಂಧಗಳು ಗಟ್ಟಿಯಾಗಬೇಕು. ಈದ್ ಮಿಲಾದ್ ಮಹತ್ವ ಹಾಗೂ ಹಿರಿಮೆ ಹೊಂದಿದೆ. ಮಹಮದ್ ಪೈಗಂಬರ್ ಅವರ ಸಂದೇಶಗಳು ಅಲ್ಲಾನ ಸಂದೇಶಗಳಾಗಿವೆ. ಅವು ಮನುಕುಲಕ್ಕೆ ಕೊಡುಗೆಯಾಗಿವೆ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸಿದರೆ ಎಲ್ಲವನ್ನೂ ಪಡೆಯಲು ಸಾಧ್ಯ. ಪವಿತ್ರ ವಿಷಯಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಮುನ್ನಡೆಸಬೇಕು ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರು ತೋಂಟದ ಸಿದ್ದಲಿಂಗ ಸ್ವಾಮಿಗಳು, ಸರ್ವರನ್ನೂ ಸಮಾನವಾಗಿ ಕಾಣುವ ಮನಸ್ಸನ್ನು ನಾವು ಹೊಂದಬೇಕು. ದೇಶದಲ್ಲಿ ಸಮಾನತೆಯ ಘೋಷಣೆ ಮಾತಿನಲ್ಲಿ ಮಾತ್ರ ಅಲ್ಲ, ಅದು ಸಂವಿಧಾನಬದ್ಧವಾಗಿದೆ. ಮುಸ್ಲಿಮರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಮಹಮದ್ ಪೈಗಂಬರ್ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಪ್ರೊ೤ ಕೆ.ಜೆ. ನಾಗರಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರ್.ಎಸ್. ದೇಸಾಯಿ, ವೆಂಕರಡ್ಡಿ ಜಾವೂರ, ಎಂ.ಎಚ್. ರಾಣೆಬೆನ್ನೂರ, ಎಸ್.ಎನ್. ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು. ಮುಂಬೈನ ಹಜರತ್ ಮೌಲಾನಾ ಮುಫ್ತಿ ಮಹ್ಮದ ಉಮರಸಾಬ ಕಾಸ್ಮಿ ಅವರಿಂದ ಬಯಾನ ಜರುಗಿತು. ಅಕ್ಬರಸಾಬ ಬಬರ್ಚಿ ಅಧ್ಯಕ್ಷತೆ ವಹಿಸಿದ್ದರು. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಸಾಧಿಕ್ ನರಗುಂದ, ನಗರಸಭೆ ಸದಸ್ಯ ಸುರೇಶ ಕಟ್ಟಿಮನಿ, ಪೀರಸಾಬ ಕೌತಾಳ, ಜಿ.ಎಂ. ದಂಡಿನ, ಗುಲಾಮಹುಸೇನ ಬನ್ನೂರ, ರಾಜೇಖಾನ ಪಠಾಣ, ಅಲ್ತಾಫ್ ರಾಣೆಬೆನ್ನೂರ, ರಜಾಕ್ ಡಂಕೇದ, ಭರತ್ ಇರಾಳ, ಹಾಜಿ ಹುಸೇನಸಾಬ ಪಲ್ಲೇದ ಇದ್ದರು. ಈದ್ ಮಿಲಾದ್ ಕಮಿಟಿಯ ಅಧ್ಯಕ್ಷ ಎಂ.ಐ. ನವಲೂರ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement