6 ದಶಕ ಕಳೆದರೂ ಮೂಲ ಸೌಕರ್ಯವಿಲ್ಲ (ಸುದ್ದಿ ಸಂಕ್ಷೇಪ)
ಗಜೇಂದ್ರಗಡ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ಥಿತ್ವಕ್ಕೆ ಬಂದು 6 ದಶಕಗಳು ಕಳೆದರೂ ಇಂದಿಗೂ ಮಹಿಳೆಯರಿಗೆ, ದುರ್ಬಲ, ಶೋಷಿತ ಜನಾಂಗಕ್ಕೆ ಸರ್ಕಾರದ ಮೂಲ ಸೌಕರ್ಯ ಸಿಗದಿರುವುದು ಆಡಳಿತ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸಾಹಿತಿ ಪ್ರೊ. ಎಫ್.ಎಸ್. ಕರಿದುರಗನವರ ಹೇಳಿದರು.
ಅವರು ಸ್ಥಳೀಯ ತುಳಜಾಭವಾನಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 64ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯ ಮಹಾದಾಸೆಯೊಂದಿಗೆ ಲಕ್ಷಾಂತರ ಜನರು ನಿಸ್ವಾರ್ಥದೊಂದಿಗೆ ಹೋರಾಡಿ ಪಡೆದ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳು ಇಂದು ಕೆಲ ಸ್ವಾರ್ಥಿಗಳ ಸ್ವತ್ತಾಗಿರುವುದರಿಂದ ಶೋಷಿತ ಸಮುದಾಯಗಳಿಗೆ ಸರ್ಕಾರದ ಸೇವೆ ಮರೀಚಿಕೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಶಾಲಾ ಅಧ್ಯಕ್ಷ ಲಾಲಪ್ಪ ರಾಠೋಡ, ಎಸ್.ವೈ. ಮುಧೋಳ, ರವಿ ಗಡೇದವರ, ಲೋಕಪ್ಪ ರಾಠೋಡ ಮುಂತಾದವರು ಪಾಲ್ಗೊಂಡಿದ್ದರು.
ಪುರಸಭೆಯಲ್ಲಿ ಗಣರಾಜ್ಯೋತ್ಸವ: ಪುರಸಭೆ ಅಧ್ಯಕ್ಷೆ ದೇವಕ್ಕ ಬೆಳವಣಕಿ 64ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ಎ.ಬಿ. ಲೋದಿ, ಪ್ರಭು ಚವಡಿ ತಿಮ್ಮಣ್ಣ ವನ್ನಾಲ, ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ ಮುಂತಾದವರು ಪಾಲ್ಗೊಂಡಿದ್ದರು. ಅಲ್ಲದೇ ಸ್ಥಳೀಯ ಕಾಲಕಾಲೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಜಗಜ್ಯೋತಿ ಬಸವೇಶ್ವರ ವೃತ್ತ, ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ 64ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚಸಿದರು.
ಮುಳಗುಂದ: 64ನೇ ಗಣರಾಜ್ಯೋತ್ಸವ ಆಚರಣೆ
ಮುಳಗುಂದ: ಪಟ್ಟಣದಲ್ಲಿ 64ನೇ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ಪಟ್ಟಣದ ಮದ್ಯಬಾಗದಲ್ಲಿರುವ ಗಾಂಧಿ ಕಟ್ಟೆಮೇಲೆ ಪಪಂ ಅಧ್ಯಕ್ಷೆ ವಿ.ಪಿ. ವಂಟಕರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಹಸನಸಾಬ ಗಾಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಕುಬೇರಪ್ಪ ಗಡಾದ, ಸದಸ್ಯ ಸಿ.ಬಿ. ಬಡ್ನಿ, ಬಿ.ಎಂ. ಕುಲಕರ್ಣಿ, ಕೆ.ಎಲ್. ಕರಿಗೌಡರ, ಗಂಗಮ್ಮ ಶಿರಹಟ್ಟಿ, ಬಸುರಾಜ ಸುಂಕಾಪೂರ, ಲಕ್ಷ್ಮವ್ವ ಕುಂದಗೋಳ, ನಿರ್ಮಲಾ ನೀರಲಗಿ, ಮಲ್ಲವ್ವ ಹಾರೋಗೇರಿ, ಅಕ್ಕಮ್ಮ ಚೌವ್ಹಾಣ, ಮುಖಂಡರಾದ ಬುದ್ದಪ್ಪ ಮಾಡಳ್ಳಿ, ಮೋಹನ ಮದ್ದಿನ, ಬಿ.ಎಲ್. ಜಾಧವ, ಎಂ.ಎಸ್. ಕಣವಿ, ಬಸವರಾಜ ವಾಲಿ, ಪ್ರಭು ಬಳಿಗೇರ, ಶಿದ್ರಾಮಯ್ಯ ಹಿರೇಮಠ, ಅಡಿವೆಪ್ಪ ಬಾತಖಾನಿ, ಪಪಂ ಅಭಿಯಂತರ ಎಸ್.ಪಿ. ಕಾಟೆವಾಲೆ, ಮೌಲಾಸಾಬ್ ಸದರಬಾವಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಪಟ್ಟಣದ ವಿವಿಧ ಶಾಲಾ ಕಾಲೇಜು, ಶಿಕ್ಷಕರು, ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಪ್ರಭಾತಪೆರಿ ನಡೆಸಿದರು.
ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಿ
ರೋಣ: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವಲ್ಲಿ ಯುವ ಜನತೆ ಪಣ ತೊಡಬೇಕು. ದೇಶ ರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ. ಐಕ್ಯತೆ ಮತ್ತು ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದು ಪ್ರಜೆಯ ಕರ್ತವ್ಯವಾಗಿದೆ ಎಂದು ತಹಸೀಲ್ದಾರ್ ಎಸ್.ಆರ್. ಕಡಿವಾಲ ಹೇಳಿದರು. ಅವರು ಶನಿವಾರ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ತಾಲೂಕು ಗಣರಾಜ್ಯೋತ್ಸವ ಸಮಿತಿ, ತಾಲೂಕು ಆಡಳಿತ ವತಿಯಿಂದ 64ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗಣರಾಜ್ಯೋತ್ಸವ ನಿಮಿತ್ತ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಕವಾಯತು, ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಮಾರಂಭದಲ್ಲಿ ತಾಪಂ. ಅಧ್ಯಕ್ಷೆ ಲಲಿತಾ ಪೂಜಾರ, ಪುರಸಭೆ ಅಧ್ಯಕ್ಷೆ ನೀಲವ್ವ ಮುಗಳಿ, ಬಿಇಓ ಕೆ.ವಿ. ಪಾಟೀಲ, ಎಪಿಎಂಸಿ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ವಿ.ಕೆ. ಕಾಳಪ್ಪನವರ, ಎನ್.ಎಸ್. ಕೂಡಲ, ಎಸ್.ಎ. ಸೌದತ್ತಿ, ವಿಶ್ವನಾಥ ಜಿಡ್ಡಿಬಾಗಿಲ, ಪ್ರಶಾಂತ ವರಗಪ್ಪನವರ, ಮಲ್ಲನಗೌಡ ನಾಯಕ, ಅನಂತಕುಮಾರ ಚೂರಿ, ಶಬ್ಬೀರ ಖಾಜಿ, ವೀರೇಶ ದೊಡ್ಡಣ್ಣವರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣಾಧಿಕಾರಿ ಎಸ್.ವೈ.ಯಡಳ್ಳಿ ನಿರೂಪಿಸಿ, ವಂದಿಸಿದರು.
ಧ್ವಜಾರೋಹಣಕ್ಕೆ ನಿರ್ಲಕ್ಷ್ಯ: ಆಕ್ರೋಶ
ನರಗುಂದ: ತಾಲೂಕಿನ ಹಳೇ ತಹಸೀಲ್ದಾರ ಕಚೇರಿಯಲ್ಲಿ ಪ್ರತಿವರ್ಷ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತಿತ್ತು. ಈ ವರ್ಷ ಕೆಲವು ಇಲಾಖೆಗಳು ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರಗೊಂಡಿರುವ ಕಾರಣ ಅಧಿಕಾರಿಗಳು ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಧ್ವಜಾರೋಹಣ ಮಾಡಲು ನಿರ್ಲಕ್ಷ್ಯ ವಹಿಸಿದ್ದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಹಳೇ ತಹಸೀಲ್ದಾರ ಕಚೇರಿಯಲ್ಲಿ ಉಪ-ನೋಂದಣಿ, ಅಬಕಾರಿ, ಕಂದಾಯ ನಿರೀಕ್ಷಕರು, ಅಟಲ್ ಜನಸ್ನೇಹಿ ಕೇಂದ್ರಗಳು, ಭೂ ದಾಖಲೆಗಳು ಗಣಕೀಕರಣ ಕೇಂದ್ರಗಳಿದ್ದರೂ ಅಧಿಕಾರಿಗಳು ತಮಗೂ ಗಣರಾಜ್ಯೋತ್ಸವಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಧ್ವಜಾರೋಹಣ ಮಾಡದ ಇಲಾಖೆ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ವಾತಂತ್ರ್ಯ ಹೋರಾಟಗಾರರು ಆಗ್ರಹಿಸಿದ್ದಾರೆ.