ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧಾರ್ಮಿಕ ಕಾರ್ಯಕ್ರಮದಿಂದ ನೆಮ್ಮದಿ: ರಾಮಣ್ಣ ಲಮಾಣಿ

Mainashree
Updated On : 27 Jan 2013, 11:18 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜ. 26
ಶ್ರೀಮಂತಿಕೆಗಿಂತ ಧರ್ಮ ದೊಡ್ಡದು. ಧಾರ್ಮಿಕ ಕಾರ್ಯಕ್ರಮಗಳಿಂದ ಮನದ ಮಲೀನತೆ ತೊಡೆದು, ಶಾಂತಿ, ನೆಮ್ಮದಿ ದೊರೆಯುತ್ತದೆ. ಅನೇಕ ಶರಣರು, ಸಂತರು ಬಾಳಿ ಬದುಕಿದ ಈ ನಾಡು ಧಾರ್ಮಿಕವಾಗಿ ಶ್ರೀಮಂತ ಹಾಗೂ ಸಂಪದ್ಭರಿತವಾಗಿದೆ ಎಂದು ಶಾಸಕ ರಾಮಣ್ಣ ಲಮಾಣಿಹೇಳಿದರು.
ಅವರು ಶುಕ್ರವಾರ ಸಂಜೆ ಶಿರಹಟ್ಟಿ ಗ್ರಾಮದೇವತೆ ದ್ಯಾಮವ್ವ ದೇವಿಯ ದ್ವಿತೀಯ ಜಾತ್ರಾ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ಪ್ರವಚನ ಹಾಗೂ ನಗೆಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನುಷ್ಯ ಶ್ರದ್ಧೆಯಿಂದ ಮಾಡುವ ಸತ್ಕಾರ್ಯ ಕಾಯಕವೆನಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಇಷ್ಟಪಟ್ಟು ಮಾಡಬೇಕು. ಆಧುನಿಕ ಯುಗದಲ್ಲಿ ಮಾನವೀಯತೆ ಮಾಯವಾಗಿ ಸ್ವಾರ್ಥ ಮನೋಭಾವನೆ ಹೆಚ್ಚಿದೆ. ಇಂತಹ ಸಂಕೀರ್ಣ ಸ್ಥಿತಿಯಲ್ಲಿ ಜನರಲ್ಲಿ ಮಾನವೀಯ ಮೌಲ್ಯ ಗುಣಗಳನ್ನು ಬಿತ್ತುವ ಕೆಲಸವಾಗಬೇಕಾಗಿದೆ. ಹಬ್ಬ ಹರಿದಿನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿವೆ. ಭಕ್ತಿ, ಶ್ರದ್ಧೆ, ದೇವರು, ಆಧ್ಯಾತ್ಮ ಬರೀ ಉಪನ್ಯಾಸದ ಪದಗಳಾಗಿವೆ ಎಂದು ಶಾಸಕ ರಾಮಣ್ಣ ಲಮಾಣಿ ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡ ಡಿ.ಎನ್. ಡಬಾಲಿ, ಮಾಜಿ ಶಾಸಕ ಎಸ್.ಎನ್. ಪಾಟೀಲ ಮಾತನಾಡಿ, ಜೀವನದಲ್ಲಿ ಆರ್ಥಿಕವಾಗಿ ಎಷ್ಟೇ ಸಂಪಾದಿಸಿದರೂ ಸಹ ಮನುಷ್ಯನಿಗೆ ಸಿಗಬೇಕಾದ ಸಮಾಧಾನ ದೊರಕುತ್ತಿಲ್ಲ. ಶಾಂತಿ, ಸಮಾಧಾನ ಮನುಷ್ಯನಿಗೆ ಪ್ರಾಪ್ತವಾಗಬೇಕಾದರೆ ಧರ್ಮಾಚರಣೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಸೀಮಣ್ಣ ಅಕ್ಕಿ, ಪಪಂ ಸದಸ್ಯ ರಾಮಣ್ಣ ಡಂಬಳ, ವೈ.ಎಸ್. ಪಾಟೀಲ, ಎನ್.ಆರ್. ಕುಲಕರ್ಣಿ, ಬಿ.ಎಂ. ಭೋರಶೆಟ್ಟರ, ಬಸವರಾಜ ಹೊಸೂರ, ಶಶಿಧರ ರಾನಡೆ, ಪ್ರೇಮಕ್ಕ ಬಿಂಕದಕಟ್ಟಿ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇಂದುಮತಿ ಸಾಲಿಮಠ ಅವರಿಂದ ನಗೆಹಬ್ಬ ಕಾರ್ಯಕ್ರಮ ಜರುಗಿತು. ಪಪಂ ಸದಸ್ಯ ಸುಧೀರ ಜಮಖಂಡಿ ಸ್ವಾಗತಿಸಿದರು. ಕೆ.ಎ. ಬಳಿಗೇರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement