ಒಣಗುತ್ತಿರುವ ಹತ್ತಿ: ರೈತರಿಗೆ ಹಾನಿ
ಕನ್ನಡಪ್ರಭ ವಾರ್ತೆ, ಗದಗ, ಜ. 27
ದಶಕದ ಹಿಂದೆ ಜಿಲ್ಲೆಯ ರೈತರ ಪಾಲಿಗೆ ವರದಾನವಾಗಿದ್ದ ಹತ್ತಿ ಬೆಳೆ, ಪ್ರಸಕ್ತ ಸಾಲಿನಲ್ಲಿ ರೈತರಿಗೆ ಮಾತ್ರ ಆರ್ಥಿಕ ಹೊರೆಯುಂಟು ಮಾಡುವ ಬೆಳೆಯಾಗಿ ಮಾರ್ಪಟ್ಟಿದೆ.
ಹತ್ತಿ ಬೆಳೆದ ರೈತರಿಗೆ ಬಿತ್ತನೆ ಮಾಡಿದ ಖರ್ಚು ಮರಳಿ ಬರದಂತಹ ಸ್ಥಿತಿ ನಿರ್ಮಾಣವಾಗಿದ್ದು, ಬರಗಾಲದಿಂದ ತತ್ತರಿಸಿದವರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗದೇ ತೊಂದರೆಯಾಗಿತ್ತು, ಆದರೆ ಹಿಂಗಾರು ಬಿತ್ತನೆಯ ವೇಳೆಯಲ್ಲಿ ಜಿಲ್ಲೆಯ ರೈತರ ಜೀವನಕ್ಕೆ ಆಸರೆಯಾಗುವ ರೂಪದಲ್ಲಿ ಬಂದ ನಿಲಂ ಚಂಡ ಮಾರುತ ಪ್ರಭಾವದಿಂದ ಸುರಿದ ಮಳೆಯಿಂದಾಗಿ ಅಲ್ಪ ತೃಪ್ತಿ ತರುವ ನಿಟ್ಟಿನಲ್ಲಿ ಹಿಂಗಾರಿ ಬಿತ್ತನೆಯಾಗಿತ್ತು. ಅದರಲ್ಲಿ ಪ್ರಮುಖವಾಗಿ ಕಡಲೆ ಹಾಗೂ ಹತ್ತಿ ಬಿತ್ತನೆಯನ್ನೇ ರೈತರು ಹೆಚ್ಚಾಗಿ ಮಾಡಿದ್ದು, ಸದ್ಯ ತೀವ್ರ ತೇವಾಂಶದ ಕೊರತೆಯಿಂದ ಹತ್ತಿ ಬೆಳೆ ಒಣಗಿ ಹೋಗುತ್ತಿದೆ.
ಬಿತ್ತನೆ ವಿವರ: ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ 54 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದ್ದು, ಅದರಲ್ಲಿ ಪ್ರಮುಖವಾಗಿ ಜಯಧರ ಹತ್ತಿ ಬೆಳೆಯೇ 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ (ಒಣ ಬೇಸಾಯ) ಬಿತ್ತನೆಯಾಗಿದೆ. ಇಂದು ಈ ಎಲ್ಲ ಬೆಳೆಗೆ ಗಿಡಕ್ಕೆ 3 ರಿಂದ 4 ಕಾಯಿಗಳು ಮಾತ್ರ ಬಿಟ್ಟಿವೆ. ಇನ್ನು ನರಗುಂದ ತಾಲೂಕಿನಲ್ಲಿಯೇ ಅತಿ ಹೆಚ್ಚು 6125 ಹೆಕ್ಟೇರ್ ಅಧಿಕ ಪ್ರದೇಶದಲ್ಲಿ ನೀರಾವರಿ ಆಶ್ರಯದಲ್ಲಿ ಬಿ.ಟಿ. ಹತ್ತಿ ಸೇರಿದಂತೆ ವಿವಿಧ ಹತ್ತಿಯನ್ನು ಬಿತ್ತನೆ ಮಾಡಿದ್ದಾರೆ.
ತೇವಾಂಶದ ಕೊರತೆ: ಬೆಳವಣಿಗೆ ಕುಂಠಿತ ಹಾಗೂ ಹೆಚ್ಚಿನ ಇಳುವರಿ ಬರದಿರುವುದಕ್ಕೆ ಪ್ರಮುಖ ಕಾರಣ ತೇವಾಂಶದ ಕೊರತೆ. ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಇನ್ನು ಬೆಳೆ ಉತ್ತಮವಾಗಿ ಬೆಳೆಯದ ಹಿನ್ನೆಲೆಯಲ್ಲಿ ನಿರೀಕ್ಷಿಸಿದಷ್ಟು ಕಾಯಿಗಳು ಬಿಟ್ಟಿಲ್ಲ. ವಾಡಿಕೆಯಂತೆ ಫೆಬ್ರವರಿ ಅಂತ್ಯಕ್ಕೆ ಜಿಲ್ಲೆಯಲ್ಲಿ ಹತ್ತಿ ಬಿಡಿಸುವ ಕಾರ್ಯ (3ನೇ ಹಂತದ) ನಡೆಯುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಕೆಲ ಗ್ರಾಮಗಳಲ್ಲಿ ಡಿಸೆಂಬರ್ ಅಂತ್ಯಕ್ಕೆ ಹತ್ತಿ ಬಿಡಿಸುವ (ಹತ್ತಿ ಸುಗ್ಗಿ) ಪೂರ್ಣಗೊಂಡರೆ ಮತ್ತೆ ಕೆಲವೆಡೆ ಜನವರಿ ಮಧ್ಯದಲ್ಲಿಯೇ ಕೊನೆಗೊಂಡಿದೆ.
ಹವಾಗುಣ ಪರಿಣಾಮ: ಹತ್ತಿ ಬೆಳೆಗೆ ಹತ್ತು ಕುತ್ತು (ತೊಂದರೆ) ಎನ್ನುವುದು ರೈತಾಪಿ ವರ್ಗದಲ್ಲಿ ಚಾಲ್ತಿಯಲ್ಲಿರುವ ಮಾತು. ಅದು ಈ ಬಾರಿ ಅಕ್ಷರಶಃ ಸತ್ಯವಾಗಿದ್ದು, ಮೊದಲೇ ತೇವಾಂಶದ ಕೊರತೆಯಿಂದ ನರಳುತ್ತಿದ್ದ ಬೆಳೆಗೆ ಕಳೆದ ಒಂದುವರೆ ತಿಂಗಳಿಂದ ಬೀಸುತ್ತಿರುವ ತೀವ್ರ ಒಣ ಹವೆ, ಸಮಸ್ಯೆಯನ್ನು ಮತ್ತಷ್ಟು ಇಂಬುಗೊಳಿಸಿತು. ಇದರಿಂದ ಹತ್ತಿ ಬೆಳೆ ಸಂಪೂರ್ಣ ಒಣಗಿ ಹೋಗಿದ್ದು, ಇಳುವರಿ ಕುಸಿತವಾಗಲು ಪ್ರಮುಖ ಕಾರಣವಾಗಿದೆ. ಇದರೊಟ್ಟಿಗೆ ಕಾಯಿಕೊರದ ಬಾಧೆ ಕಾಡುತ್ತಿದ್ದು, ಹತ್ತಿ ಬಿತ್ತನೆ ಮಾಡಿದ ಪ್ರತಿಯೊಬ್ಬ ರೈತರು ನಷ್ಟ ಅನುಭವಿಸುವಂತಾಗಿದೆ.
ಕೈಗೆ ಬಾರದ ಬೆಳೆ: ಕೃಷಿ ಎನ್ನುವುದು ಪ್ರಸಕ್ತ ಸಾಲಿನಲ್ಲಿ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಪ್ರತಿ ಹಂತದಲ್ಲಿ ಸಾವಿರಾರು ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳು ಕೈ ತಪ್ಪಿ ಹೋಗುತ್ತಿದ್ದು, ಸದ್ಯ ಹತ್ತಿ ಬೆಳೆ ನಿರೀಕ್ಷಿತ ಪ್ರಮಾಣದ ಬರದೇ, ಕನಿಷ್ಠ ಇಳುವರಿಯೂ ಬರುತ್ತಿಲ್ಲ. ಇನ್ನುಳಿದ ಹಿಂಗಾರಿ ಬೆಳೆಗಳಾದ ಜೋಳ, ಗೋಧಿ ಈ ಪರಿಸ್ಥಿತಿಯಿಂದ ಹೊರತಾಗಿಲ್ಲ.