ಶುದ್ಧ ನೀರಿನಿಂದ ಆರೋಗ್ಯ: ಲಮಾಣಿ
ಮುಂಡರಗಿ: ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಮುಂಡರಗಿ ಹಾಗೂ ಶಿರಹಟ್ಟಿ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳಾಗಿದ್ದು, ಉತ್ತಮ ಆರೋಗ್ಯಕ್ಕೆ ಶುದ್ಧ ನೀರು ಅವಶ್ಯವಾಗಿದೆ. ಆದ್ದರಿಂದ ಬೆಣ್ಣಿಹಳ್ಳಿ ಹಾಗೂ ಮಕ್ತುಂಪುರ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರು ಘಟಕ ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಶನಿವಾರ ತಾಲೂಕಿನ ಮಕ್ತುಂಪುರ ಹಾಗೂ ಬೆಣ್ಣಿಹಳ್ಳಿ ಗ್ರಾಮಗಳಲ್ಲಿ ಜಿಪಂ ಎಂಜಿನಿಯರಿಂಗ್ ಇಲಾಖೆಯಿಂದ ತಲಾ ರು. 10 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿವ ನೀರು ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಬೆಣ್ಣಿಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೀಗ ಮಾರುಕಟ್ಟೆಯಲ್ಲಿ 1 ಲೀಟರ್ ಶುದ್ಧ ಕುಡಿವ ನೀರಿಗೆ ರು. 15 ನೀಡಬೇಕು. ಆದರೆ ಗ್ರಾಮೀಣ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ 10 ಪೈಸೆಗೆ 1 ಲೀಟರ್ ಶುದ್ಧ ಕುಡಿವ ನೀರು ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ಈ ಹಿಂದೆ ಕಲಕೇರಿ, ಶಿಂಗಟಾಲೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದ್ದು, ಬೆಣ್ಣಿಹಳ್ಳಿ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಗ್ರಾಮಕ್ಕೆ ಹೆಚ್ಚಿನ ಆಶ್ರಯ ಮನೆಗಳನ್ನು ಮಂಜೂರಿ ಮಾಡಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮನೆಗಳನ್ನು ನೀಡುವುದಾಗಿ ತಿಳಿಸಿ, ಅಭಿವೃದ್ಧಿಯಲ್ಲಿ ಶಿರಹಟ್ಟಿ ಮತಕ್ಷೇತ್ರ ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿದೆ. ಸಿ.ಎಂ. ಶೆಟ್ಟರ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ನೂರಾರು ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ ಎಂದರು.
ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಯುವ ಮುಖಂಡ ಚಂದ್ರು ಲಮಾಣಿ, ಇಓ ಎಸ್.ವಿ. ತಿಗರಿಮಠ, ಎಂ.ಡಿ. ಪಾಟೀಲ, ರಂಗಪ್ಪ ಕ್ಯಾದಿಗಿಹಳ್ಳಿ, ಶಂಕ್ರಪ್ಪ ಹಳ್ಳಿಕೇರಿ, ಸುರೇಶ ಕ್ಯಾದಿಗಿಹಳ್ಳಿ, ಆರ್.ಎಂ. ತಪ್ಪಡಿ, ಅಣ್ಣಯ್ಯ ಪಾಟೀಲ, ಶಿವಮೂರ್ತಿಗೌಡ ಪಾಟೀಲ, ತಿಪ್ಪಣ್ಣ ಭಜಂತ್ರಿ, ಬಸವರಡ್ಡೆಪ್ಪ ಹಾದಿಮನಿ, ಶೇಖಪ್ಪ ಗೊಂಡಬಾಳ, ರಾಮಪ್ಪ ವಾಲಿಕಾರ, ಅಂದಪ್ಪ ವಾಲಿಕಾರ, ಹನಮಂತಪ್ಪ ಪೂಜಾರ, ಇಂದಪ್ಪ ಹೊಸಮನಿ, ಎಂ.ಜಿ. ಮಕಾಂದಾರ, ಕೆ.ಎಚ್. ಮಕಾಂದಾರ, ರಾಮಣ್ಣ ಗೌಡರ, ನಿಂಗಪ್ಪ ಮಡೇಹೊಲದ, ಪರಮೇಶ್ವರಪ್ಪ ಗೊಣೆನ್ನವರ ಇದ್ದರು.