ಗ್ರಾಮಾಭಿವೃದ್ಧಿಗೆ ಆದ್ಯತೆ: ಬಂಡಿ
ಕನ್ನಡಪ್ರಭ ವಾರ್ತೆ, ರೋಣ, ಜ. 28
ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಯೊಂದಿಗೆ ನನ್ನ ನೆಚ್ಚಿನ ಗ್ರಾಮವಾದ ಕೊತಬಾಳ ಗ್ರಾಮದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಸೋಮವಾರ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಸುವರ್ಣ ಗ್ರಾಮೋದಯದಲ್ಲಿ ಕರ್ನಾಟಕ ರೂರಲ್ ಡೆವಲಪ್‌ಮೆಂಟ್ ಸಂಸ್ಥೆ ನಿರ್ಮಿಸಿರುವ ಸಮುದಾಯ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕೊತಬಾಳ ಗ್ರಾಪಂ ವ್ಯಾಪ್ತಿಯ ಮುಗಳಿ ಗ್ರಾಮದ ಜನತೆಯ ಬಹುದಿನಗಳ ಬೇಡಿಕೆಯಾದ ಸೇತುವೆ ನಿರ್ಮಾಣಕ್ಕೆ # 5 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ನನ್ನ ಕ್ಷೇತ್ರ ವ್ಯಾಪ್ತಿಯ ಯಾವುದೇ ಗ್ರಾಮವನ್ನು ನಿರ್ಲಕ್ಷಿಸುವುದಿಲ್ಲ. ನಾನು ಎಂದಿಗೂ ಮತ ರಾಜಕಾರಣ ಮಾಡುವವನಲ್ಲ. ನನಗೆ ಕ್ಷೇತ್ರದ ಜನತೆಯ ಸೇವೆ ಮಾಡುವ ಭಾಗ್ಯ ನೀಡಿದ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದೆ.
ಮಾತಿಗಿಂತ ಕಾಯಕ ಮುಖ್ಯ ಎಂಬ ನೀತಿಯ ಬೆನ್ನತ್ತಿ, ಅದರಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದೇನೆ ಎಂದು ಸಚಿವ ಬಂಡಿ ಹೇಳಿದರು.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಇಲ್ಲ. ಅವು ಯಾವ ವೇಗದಲ್ಲಿ ಹುಟ್ಟಿಕೊಳ್ಳುತ್ತವೆಯೋ ಅದು ವೇಗದಲ್ಲಿ ಸಾಯುತ್ತವೆ. ಅವುಗಳ ಬೆನ್ನತ್ತಿ ಹೋಗುವವರ ಪಾಡು ನೀವೇ ನೋಡುವಿರಿ ಏನಾಗುತ್ತದೆ ಎಂದು ಲೇವಡಿ ಮಾಡಿದರು.
ಅಂಕಲಗಿ ಮಠದ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಪಂ ಸದಸ್ಯ ಧರ್ಮಣ್ಣ ಭೂಸಗೌಡ್ರ, ಶಿವಕುಮಾರ ಸಾಲಮನಿ, ಭೀಮನಗೌಡ ಗೌಡರ, ಸಿದ್ದು ಯಾಳಗಿ, ಬಸಮ್ಮ ಜಿಗಳೂರ, ಅಶೋಕ ನವಲಗುಂದ, ಶಿವಾನಂದ ಜಿಡ್ಡಿಬಾಗಿಲ, ಮುತ್ತಣ್ಣ ಲಿಂಗನಗೌಡ್ರ, ಎಸ್.ಎಸ್. ಮುದಗಲ್, ಎನ್.ಎಸ್. ಮಾಲಿಪಾಟೀಲ, ಪಿ.ಸಿ. ಪೊಲೀಸ್‌ಪಾಟೀಲ, ಬಸವಂತಪ್ಪ ತಳವಾರ, ಸಂಗಪ್ಪ ದಿಂಡೂರ, ಬಿ.ಆರ್.ನಾಲ್ವಾಡದ ಉಪಸ್ಥಿತರಿದ್ದರು. ಶಂಕ್ರಣ್ಣ ಸಂಕಣ್ಣವರ ಕಾರ್ಯಕ್ರಮ ನಿರೂಪಿಸಿದರು.