ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮನೆ ವಿತರಣೆಯಲ್ಲಿ ಅನ್ಯಾಯ: ಮನವಿ

Rashmi Kasaragodu
Updated On : 29 Jan 2013, 1:36 am




ಕನ್ನಡಪ್ರಭ ವಾರ್ತೆ, ನರಗುಂದ, ಜ. 28
ತಾಲೂಕಿನ ಕುರ್ಲಗೇರಿ ಗ್ರಾಮವು ಬೆಣ್ಣೆ ಹಳ್ಳದ ಪ್ರವಾಹದಿಂದ ಸ್ಥಳಾಂತರಗೊಂಡು ನೂತನ ಆಸರೆ ಮನೆಗಳನ್ನು ನೀಡುವಲ್ಲಿ ಬಡವರಿಗೆ ಮತ್ತು ದಲಿತ ಜನಾಂಗಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ನ್ಯಾಯವಾದಿ ಎಫ್.ವೈ. ದೊಡಮನಿ ಮಾತನಾಡಿ, ಈ ಹಿಂದೆ 2007ರಲ್ಲಿ ಬೆಣ್ಣೆ ಹಳ್ಳಕ್ಕೆ ಭಾರೀ ಪ್ರಮಾಣದ ಪ್ರವಾಹ ಬಂದದ್ದರಿಂದ ಕುರ್ಲಗೇರಿ ಗ್ರಾಮವು ಸಂಪೂರ್ಣ ನೀರು ಹೊಕ್ಕು ಹೆಚ್ಚು ಮನೆಗಳು ಬಿದ್ದಿದ್ದರಿಂದ ಈ ಗ್ರಾಮವನ್ನು ಸರ್ಕಾರ ಸ್ಥಳಾಂತರ ಮಾಡಬೇಕೆಂದು ಆದೇಶ ಮಾಡಿದ್ದು, ದಾನಿಗಳಾದ ಆದಿಚುಂಚನಗಿರಿ ಶ್ರೀಗಳು ಈ ಗ್ರಾಮವನ್ನು ದತ್ತು ತೆಗೆದುಕೊಂಡು 552 ಮನೆಗಳನ್ನು ನಿರ್ಮಿಸಿದ್ದಾರೆ. ಈ ಗ್ರಾಮಸ್ಥರಿಗೆ 2009ರಲ್ಲಿ ಸರ್ವೆ ಮಾಡಿ ಸರಿಯಾಗಿ ಮನೆಗಳ ಪಟ್ಟಿ ತಯಾರಿಸಿದ್ದರು. ಆದರೆ, ಮುಂದೆ ಸ್ಥಳೀಯ ಕೆಲವು ಪ್ರಭಾವಿ ಮುಖಂಡರು ಈ ಪಟ್ಟಿ ರದ್ದು ಮಾಡಿ, ತಮಗೆ ಬೇಕಾದವರಿಗೆ ತಮ್ಮ ಸಂಬಂಧಿಕರಿಗೆ ಮನೆ ನೀಡಲು ಪಟ್ಟಿ ಸಿದ್ಧಪಡಿಸಿದ್ದು, ಇದರಲ್ಲಿ ನಿಜವಾದ ಬಡವರು ಮತ್ತು ದಲಿತರಿಗೆ ಮನೆಗಳು ಸಿಗದಂತಾಗಿದೆ. ಕೆಲವರಿಗೆ ಮಾತ್ರ ಮನೆಗಳನ್ನು ಕೊಟ್ಟಿದ್ದು, ಅದು ಬಿದ್ದು ಹೋಗುವಂತಹ ಮನೆಗಳನ್ನು ಕೊಟ್ಟಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ಮಾಡಿ ಹೆಚ್ಚುವರಿ ಮನೆಗಳನ್ನು ಮರಳಿ ಪಡೆದುಕೊಂಡು ನಿಜವಾದ ಬಡವರಿಗೆ ಮತ್ತು ದಲಿತರಿಗೆ ವಿತರಣೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಎಸ್.ಡಿ. ಪೂಜಾರ, ಯಲ್ಲಪ್ಪ ಬಳಗಾನೂರ, ಮಲ್ಲಪ್ಪ ಹೊಸಕೇರಿ, ಎಸ್.ವೈ. ಚವನ್ನವರ, ಮಹಾಂತೇಶ ಹೂಗಾರ, ಫಕೀರಪ್ಪ ಮಾದರ, ಸಂಗಪ್ಪ ಬೆಂತೂರ, ಈರಪ್ಪ ಚಕ್ಕಸಾಲಿ, ದ್ಯಾವಕ್ಕ ಚಲವನ್ನವರ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement