ಇಂದು ಮಾದಿಗರ ಸಭೆ
ರೋಣ: ತಾಲೂಕು ಆದಿಜಾಂಬವ ಮಾದಿಗರ ಸಂಘದ ತಾಲೂಕು ಮಟ್ಟದ ಸಭೆಯನ್ನು ಜ. 30ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದೆ. ಸಭೆಗೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರು ಆಗಮಿಸಿ ಸಮಾಜದ ಅಭಿವೃದ್ಧಿ ಕುರಿತು ಚರ್ಚಿಸುವರು. ತಾಲೂಕಿನ ಸಮಾಜ ಭಾಂದವರು, ಸಂಘಟನೆಯ ಮುಖಂಡರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು ಎಂದು ಪ್ರಧಾನ ಕಾರ್ಯದರ್ಶಿ ಪ್ರಕಾಸ ಹೊಸಳ್ಳಿ, ಮುಖಂಡರಾದ ಹಿರಿಯಪ್ಪ ಹಲಗಿ, ಮುತ್ತು ಮಂಜುನಾಥ ಹಾಳಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸಚಿವರ ಪ್ರವಾಸ
ಗದಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಜ. 30ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಗೆ ಆಗಮಿಸಿ ಗದಗ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವರು. ಮಧ್ಯಾಹ್ನ 1.30ಕ್ಕೆ ಬಾಗಲಕೋಟೆಗೆ ಪ್ರಯಾಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಹಿರೇವಡ್ಡಟ್ಟಿ ಬಸ್ ನಿಲ್ದಾಣ ಉದ್ಘಾಟನೆ
ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗದ ವತಿಯಿಂದ ಹಿರೇವಡ್ಡಟ್ಟಿ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭ ಜ. 30ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ. ಉಪಮುಖ್ಯಮಂತ್ರಿ, ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ್ ಉದ್ಘಾಟಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ವಾಕರಸಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಜ್ಯೋತಿ ಬೆಳಗುವರು ಎಂದು ಪ್ರಕಟಣೆ ತಿಳಿಸಿದೆ.
ಬೆಂಕಿ ಹಚ್ಚಿಕೊಂಡು ಓರ್ವ ಸಾವು
ಗದಗ: ಕಾಲು ನೋವಿನ ಬಾಧೆ ತಾಳಲಾರದೆ ವಿಕಲಾಂಗ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ನರ್ಸರಿ ತೋಟದ ಬಳಿ ಸಂಭವಿಸಿದೆ. ಮೃತನನ್ನು ಗದಗ ಶಹರದ ಉಮೇಶ ವೀರಪ್ಪ ಅಂಗಡಿ (50) ಮೃತವ್ಯಕ್ತಿ. ಈ ಬಗ್ಗೆ ಈತನ ಪತ್ನಿ ಗದಗ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.