ಫೆ. 23ರಿಂದ ಲಕ್ಕುಂಡಿ ಉತ್ಸವ: ಸಚಿವ ಬಂಡಿ
ಗದಗ: ಜಿಲ್ಲಾ ಉತ್ಸವವೆಂದು ಆಚರಿಸಲಾಗುತ್ತಿರುವ ಲಕ್ಕುಂಡಿ ಉತ್ಸವವನ್ನು ಫೆ. 23 ಹಾಗೂ 24ರಂದು ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ತಿಳಿಸಿದರು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಕ್ಕುಂಡಿ ಉತ್ಸವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫೆ. 23ರಂದು ಬೆಳಗ್ಗೆ 9 ಗಂಟೆಗೆ ಮೆರವಣಿಗೆ. ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉತ್ಸವ ಉದ್ಘಾಟಿಸುವರು. ಫೆ. 24ರಂದು ಗಜೇಂದ್ರಗಡದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಸಮಿತಿಗಳ ರಚಿಸಿ ಕಾರ್ಯ ಹಂಚಿಕೆ ಮಾಡಲಾಯಿತು. ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರಿಗೆ ತಿಳಿಸಿದರು. ಲಕ್ಕುಂಡಿ ಹಾಗೂ ಗಜೇಂದ್ರಗಡ ಎರಡೂ ಕಡೆಗಳಲ್ಲಿ ಕಲಾವಿದರಿಗೆ ಊಟದ ವ್ಯವಸ್ಥೆ ಕಲ್ಪಿಸುವಂತೆ ಜಿಪಂ ಸಿಇಓಗೆ ಸೂಚನೆ ನೀಡಿದರು. ಪ್ರತಿಯೊಂದಕ್ಕೂ ಟೆಂಡರ್ ಕರೆದು, ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯ ಎಂದರು. ಸಭೆಯಲ್ಲಿ ಜಿಪಂ ಅಧ್ಯಕ್ಷ ಎಂ.ಎಸ್.ಪಾಟೀಲ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಎಸ್ಪಿ ಡಾ ಎಸ್.ಡಿ. ಶರಣಪ್ಪ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ ಭಾಗವಹಿಸಿದ್ದರು.