ನಾಡಿನ ಸನ್ಯಾಸಿಗಳಿಗೆ ಗವಿಮಠ ಶ್ರೀ ಮಾದರಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಜ. 30
ಜಾತ್ರೆಗೊಂದು ಅರ್ಥ ನೀಡಿರುವ ಮತ್ತು ಭಕ್ತಿಯ ಶಕ್ತಿಯನ್ನು ಕ್ರೋಡೀಕರಿಸಿರುವ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ನಾಡಿನ ಸನ್ಯಾಸಿಗಳಿಗೆ ಮಾದರಿಯಾಗಿದ್ದಾರೆ ಎಂದು ಬೆಂಗಳೂರು ವಿಭೂತಿಪುರ ಮಠದ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
2013ನೇ ಸಾಲಿನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಕೈಲಾಸಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅನುಭಾವಿಗಳ ಅಮೃತ ಚಿಂತನಗೋಷ್ಠಿಯಲ್ಲಿ ಮಾತನಾಡಿದರು.
ಅವರ ಬಣ್ಣನೆಗೆ ಶಬ್ದಗಳಿಲ್ಲ. ಎಳೆಯ ವಯಸ್ಸಿನಲ್ಲಿಯೇ ಅವರು ಇಳಿವಯಸ್ಸಿನ ಸಾಧನೆ ಮಾಡುತ್ತಿದ್ದಾರೆ. ತಾಳ್ಮೆ, ಪ್ರೀತಿ, ಘನತೆ ಹಾಗೂ ದಾರ್ಶತ್ವ ಅವರನ್ನು ಎತ್ತರಕ್ಕೆ ಬೆಳೆಸುತ್ತಿದೆ. ಸಾಮಾನ್ಯವಾಗಿ ಜಾತ್ರೆ ಎಂದರೇ ಕೇವಲ ರಥ ಎಳೆದು ಹೋಗುವುದು. ಆದರೆ ಕೊಪ್ಪಳದಲ್ಲಿ ಅದಕ್ಕೊಂದು ನವೀನ ಅರ್ಥ ನೀಡಲಾಗಿದೆ. ಈ ರೀತಿ ಚಿಂತನಗೋಷ್ಠಿಗಳನ್ನು ನಡೆಸುವ ಮೂಲಕ ಮನಸ್ಸಿಗೆ ಮುದ ನೀಡುವ ಕೈಂಕರ್ಯ ನಡೆಯುತ್ತಿದೆ ಎಂದರು.
ಮುಚಳಾಂಬ ಮಠದ ಶ್ರೀ ಪ್ರಣಾವನಂದ ಮಹಾಸ್ವಾಮಿಗಳು ವಿಶೇಷ ಉಪದೇಶಾಮೃತ ನೀಡಿ, ಗವಿಮಠದ ಸಾಧನೆ ಸಣ್ಣದೇನಲ್ಲ. ಒಬ್ಬ ಸ್ವಾಮೀಜಿಗಳಾಗಿ ಶ್ರೀ ಗವಿಸಿದ್ಧೇಶ್ವರ ಶ್ರೀಗಳು ಅನನ್ಯವಾಗಿರುವುದನ್ನೇ ಮಾಡಿದ್ದಾರೆ. ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಮುಂಡರಗಿಯ ಅನ್ನದಾನ ಮಹಾಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ಅರಿವಿನ ಬದುಕು ಸಾಗಿಸಬೇಕು. ಜಾತ್ರೆಯಲ್ಲಿ ಭಾಗವಹಿಸಿ ಉತ್ತತ್ತಿ ಎಸೆದು ಹೋದರೆ ಸಾಲದು, ಬದುಕಿಗೆ ರೂಪಾಂತರ ನೀಡಬೇಕು. ಕೆಟ್ಟದ್ದನ್ನು ಬಿಟ್ಟು, ಒಳ್ಳೆಯದನ್ನು ರೂಪಿಸಿಕೊಳ್ಳಬೇಕು. ಅಂದಾಗಲೇ ಆಚರಣೆಗೂ ಒಂದು ಮನ್ನಣೆ, ಸಾರ್ಥಕತೆ ಸಿಗುತ್ತದೆ ಎಂದು ಹೇಳಿದರು.
ಹತ್ತು ವರ್ಷಗಳ ಹಿಂದಿನ ಗವಿಮಠ ಜಾತ್ರೆಗೂ ಹಾಗೂ ಈಗ ನಡೆಯುತ್ತಿರುವ ಗವಿಮಠ ಜಾತ್ರೆಗೂ ಅಜಗಜಾಂತರ ಇದೆ. ಈಗಿನ ಶ್ರೀಗಳ ಕೃಪೆಯಿಂದ ವರ್ಷದಿಂದ ವರ್ಷಕ್ಕೆ ಅದು ಬೆಳೆಯುತ್ತಲೇ ಇದ್ದು, ಇನ್ನೂ ಬೆಳೆಯಬೇಕು ಎಂದು ಶ್ರೀಗಳು ಆಶಿಸಿದರು.
ಗೋಷ್ಠಿ ನೇತೃತ್ವವನ್ನು ಗವಿಸಿದ್ಧೇಶ್ವರ ಸ್ವಾಮೀಜಿ ವಹಿಸಿದ್ದರು. ಮಂಗಳೂರು ಅರಳೆಲೆ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಉಪ್ಪಿನ ಬೆಟಗೇರಿ ಮೂರುಸಾವಿರ ಮಠದ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ ಇತರರಿದ್ದರು.
ಗವಿಸಿದ್ಧೇಶ್ವರ ಶ್ರೀಗಳ ಬಣ್ಣನೆಗೆ ಶಬ್ದಗಳಿಲ್ಲ. ಎಳೆಯ ವಯಸ್ಸಿನಲ್ಲಿಯೇ ಅವರು ಇಳಿವಯಸ್ಸಿನ ಸಾಧನೆ ಮಾಡುತ್ತಿದ್ದಾರೆ. ತಾಳ್ಮೆ, ಪ್ರೀತಿ, ಘನತೆ ಹಾಗೂ ದಾರ್ಶತ್ವ ಅವರನ್ನು ಎತ್ತರಕ್ಕೆ ಬೆಳೆಸುತ್ತಿದೆ. ಸಾಮಾನ್ಯವಾಗಿ ಜಾತ್ರೆ ಎಂದರೇ ಕೇವಲ ರಥ ಎಳೆದು ಹೋಗುವುದು. ಕೊಪ್ಪಳದಲ್ಲಿ ಅದಕ್ಕೊಂದು ನವೀನ ಅರ್ಥ ನೀಡಲಾಗಿದೆ. ಈ ರೀತಿ ಚಿಂತನ ಗೋಷ್ಠಿಗಳನ್ನು ನಡೆಸುವ ಮೂಲಕ ಮನಸ್ಸಿಗೆ ಮುದ ನೀಡುವ ಕೈಂಕರ್ಯ ನಡೆಯುತ್ತಿದೆ.
- ಶ್ರೀ ಮಹಾಂತ ಶಿವಚಾರ್ಯ ಸ್ವಾಮೀಜಿ