ಬೆಳೆ ವಿಮೆ ನೀಡದಿದ್ದರೆ ಆತ್ಮಹತ್ಯೆ: ರೈತರ ಎಚ್ಚರಿಕೆ
ಕನ್ನಡಪ್ರಭ ವಾರ್ತೆ, ನರಗುಂದ, ಜ. 30
ತಾಲೂಕಿನ ರೈತರು 2011ನೇ ಸಾಲಿನ ಮುಂಗಾರು ಬೆಳೆ ವಿಮೆ ತುಂಬಿದರೂ ಇಲ್ಲಿವರೆಗೂ ಪರಿಹಾರ ಹಣ ನೀಡುತ್ತಿಲ್ಲವೆಂದು ಆರೋಪಿಸಿ ಬುಧವಾರ ಬ್ಯಾಂಕ್‌ಗೆ ಮುತ್ತಿಗೆ ಹಾಕಿ, ಹೀಗೆ ವಿಳಂಬ ಮಾಡಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಎಚ್ಚರಿಕೆ ನೀಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, ಈ ಬ್ಯಾಂಕ್‌ನಲ್ಲಿ ವಿಮೆ ತುಂಬಿದ 236 ರೈತರು ವಿಮೆ ನೀಡುವಂತೆ ತಿಳಿಸಿದರೆ, ಸ್ವಲ್ಪ ತಡವಾಗಿ ಬರುತ್ತದೆ ಎನ್ನುವ ಹಾರಿಕೆ ಉತ್ತರವನ್ನೇ ಹೇಳುತ್ತಿದ್ದಾರೆ.
2 ತಿಂಗಳು ತಡವಾಗಿ ಕೊಡುತ್ತೇವೆಂದು ಆಗಿನ ಬ್ಯಾಂಕ್ ವ್ಯವಸ್ಥಾಪಕರು ಹೇಳಿದ್ದರು. 2 ತಿಂಗಳ ನಂತರವೂ ಅದೇ ರೀತಿ ಹೇಳುತ್ತಿದ್ದು, ಈ ಎಲ್ಲ ರೈತರು ಬ್ಯಾಂಕ್ ಬಂದ್ ಮಾಡುವ ನಿರ್ಧಾರ ಮಾಡಿದಾಗ ಮೇಲಧಿಕಾರಿಗಳು ಎಚ್ಚೆತ್ತು, ಲಿಖಿತವಾಗಿ 2013ರ ಜನವರಿಯಲ್ಲಿ ಎಲ್ಲ ರೈತರಿಗೆ # 52 ಲಕ್ಷ ಬೆಳೆವಿಮೆ ವಿತರಣೆ ಮಾಡುತ್ತೇವೆಂದು ತಿಳಿಸಿದ್ದರಿಂದ ರೈತರು ಸುಮ್ಮನಾಗಿದ್ದರು. ಆದರೆ, ಜನವರಿ ಮುಗಿಯುತ್ತಾ ಬಂದರೂ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್ ಬಂದ್ ಮಾಡಲು ನಿರ್ಧರಿಸಿದ್ದೆವು. ಆದರೆ ಬ್ಯಾಂಕ್ ಅಧಿಕಾರಿ ಕೃಷ್ಣಮೂರ್ತಿಯವರು ಇದರಲ್ಲಿ ನಮ್ಮ ಅಧಿಕಾರಿಗಳ ತಪ್ಪಾಗಿದೆ. ಅದಕ್ಕೆ ಈ ಎಲ್ಲ ರೈತರಿಗೆ ಫೆಬ್ರವರಿ ತಿಂಗಳಲ್ಲಿ ಯಾವುದೇ ಕಾರಣಕ್ಕೂ ತಪ್ಪದೇ ಹಣ ಬಿಡುಗಡೆ ಮಾಡುತ್ತೇವೆಂದು ಹೇಳಿದರು. ಈ ಸಂದರ್ಭದಲ್ಲಿ ಬಸವಗೌಡ ಚಿಕ್ಕನಗೌಡ್ರ, ಗುರುಲಿಂಗಯ್ಯ ಹಿರೇಮಠ, ಯಲ್ಲಪ್ಪಗೌಡ ಬಾಳನಗೌಡ್ರ, ಬಸವರಾಜ ಚನ್ನಪ್ಪಗೌಡ್ರ, ಮೌಲಸಾಬ್ ರಾಜೇಖಾನ, ಬಿ.ಎಸ್. ಬೋಲಖಾನ, ಶಂಕರಗೌಡ್ರ, ಮುದಕಪ್ಪ ನಾಯ್ಕರ, ಫಕೀರಪ್ಪ ಜೋಗಣ್ಣವರ, ಸಿಪಿಐ ಪ್ರಶಾಂತ ಸಿದ್ಧನಗೌಡ ಮುಂತಾದವರು ಹಾಜರಿದ್ದರು.