ಅವ್ಯವಸ್ಥೆ ಆಗರ ತುಂಗಭದ್ರಾ ನೀರು ಪೂರೈಕೆ ಘಟಕ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 17
ತುಂಗಭದ್ರಾ ನದಿಯ ಅಶುದ್ಧ ನೀರು ಕುಡಿಯುವ ಪರಿಸ್ಥಿತಿಯು ಮುಂಡರಗಿ, ಗದಗ-ಬೆಟಗೇರಿ ಮತ್ತು ಮಾರ್ಗದ ಮಧ್ಯದಲ್ಲಿರುವ ಮೇವುಂಡಿ, ಬರದೂರು, ಡಂಬಳ, ಕದಾಂಪುರ ಇತರ ಗ್ರಾಮಗಳ ಜನತೆಗೀಗ ಬಂದಿದೆ.
ತುಂಗಭದ್ರಾ ನದಿ ನೀರು ಕೊರ್ಲಹಳ್ಳಿ ಗ್ರಾಮದಿಂದ ಪೂರೈಕೆಯಾಗುತ್ತಿದೆ. ನಿತ್ಯ ಕುಡಿಯಲು ಬಳಸುವ ನದಿ ನೀರನ್ನು ಶುದ್ಧೀಕರಿಸಿ ಬಿಡುವ ಘಟಕ ಮುಂಡರಗಿಯುಲ್ಲಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇದರ ನಿರ್ವಹಣೆ ಮಾಡುತ್ತಿದೆ. 1981ರಲ್ಲಿ ನಿರ್ಮಾಣಗೊಂಡ ಎಲ್ಲ ನೀರಿನ ಟ್ಯಾಂಕ್, ಮೋಟಾರ್ ಕೊಠಡಿಗಳು ಹಾಗೂ ಇತರ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಕಟ್ಟಡಗಳ ಮೇಲ್ಛಾವಣಿ ಸಿಮೆಂಟ್ ಬೀಳುತ್ತಿದ್ದು ಒಳಗಿರುವ ಕಬ್ಬಿನ ತುಕ್ಕು ಹಿಡಿದು ಹೊರಗೆ ಕಾಣಿಸುತ್ತಿವೆ. ನದಿ ನೀರು ಅಶುದ್ಧವಾಗಿರುತ್ತದೆ. ಹೀಗಾಗಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಮುಂಡರಗಿ ಪಟ್ಟಣದಲ್ಲಿರುವ ಕಚೇರಿಯಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ನೀರನ್ನು ಶುದ್ಧೀಕರಿಸಲು ಎಲ್ಲ ವ್ಯವಸ್ಥೆ ಮಾಡಿದರೂ ಆಗಾಗ ನಿರ್ವಹಣೆ ಸಮರ್ಪಕವಾಗಿರದೇ ಶುದ್ಧೀಕರಣ ಯಂತ್ರ ಕೆಡುತ್ತಿದೆ.
ಸಿಬ್ಬಂದಿ ಕೊರತೆ: ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದ್ದು, ದಿನಗೂಲಿ ನೌಕರರೂ ಸೇರಿದಂತೆ 7 ರಿಂದ 8 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ನೀರು ಮುಂಡರಗಿಯಿಂದ ಗದಗಗೆ ಸರಬರಾಜು ಆಗುತ್ತಿದ್ದರೂ ಇದರ ಪ್ರಮುಖ ಕಚೇರಿಯನ್ನು ಗದಗಗೆ ಸ್ಥಳಾಂತರಿಸಲಾಗಿದೆ. ಇದು 3.5 ಎಂಜಿಬಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕವಾಗಿದೆ. ನದಿ ನೀರು ಬಹಳ ಪ್ರಮಾಣದಲ್ಲಿ ರಾಡಿಯಾಗಿ ಬಂದರೆ ಪಾಲಿ ಅಲ್ಯೂಮಿನಿಯಂ ಕ್ಲೋರೈಡ್ ಪೌಡರ್ ಹಾಕುತ್ತಾರೆ. ನೀರು ಬಂದರೂ ಅದನ್ನು ಶುದ್ಧೀಕರಿಸಿಯೇ ಬಿಡಬೇಕು. ಹಾಗೆ ಮಾಡದೇ ಇರುವುದರಿಂದ ನೀರು ಅಶುದ್ಧವಾಗಿ ಸರಬರಾಜು ಆಗುತ್ತಿರುವುದರಿಂದ ಜನತೆ ವಾಂತಿ-ಭೇದಿಯಂತಹ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎನ್ನುವ ಭಯದಲ್ಲಿ ನೀರನ್ನು ಬಳಕೆ ಮಾಡುತ್ತಿದ್ದಾರೆ.
ಹೆಸರಿಗೆ ಮಾತ್ರ ಲ್ಯಾಬ್: ರಸಾಯನಿಕ ಮತ್ತು ನೀರು ಶುದ್ಧೀಕರಿಸುವ ಪೌಡರ್ ಸೇರಿಸುವ ಪ್ರಮಾಣದ ಬಗ್ಗೆ ಇಲ್ಲಿ ಲ್ಯಾಬ್ ಇದೆ. ಆದರೆ, ಅದಕ್ಕೆ ಬೇಕಾದ ಉಪಕರಣಗಳು ಲ್ಯಾಬ್ನಲ್ಲಿಲ್ಲ. ಪರಿಣಿತ ಲ್ಯಾಬ್ ಸಹಾಯಕರ ಕೊರತೆ ಇದೆ ಎನ್ನುವುದು ಸಹ ಕಟುಸತ್ಯವಾಗಿದೆ. ಈಚೆಗೆ 4-5 ದಿನ ರಾಡಿ ನೀರು ಬಂದಿದ್ದನ್ನು ನೋಡಿದರೆ ಇಲ್ಲಿನ ಸಿಬ್ಬಂದಿ ಕೊರತೆ ಅರ್ಥವಾಗುತ್ತದೆ. ಇಲ್ಲಿರುವ ಲ್ಯಾಬ್ ಹೆಸರಿಗೆ ಮಾತ್ರವಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ನಿತ್ಯ ಗದಗ-ಬೆಟಗೇರಿ ಅವಳಿ ನಗರ ಹಾಗೂ ಮುಂಡರಗಿ ಪಟ್ಟಣವೂ ಸೇರಿದಂತೆ ಅನೇಕ ಕಡೆಗಳಲ್ಲಿ ನೀರು ಸರಬರಾಜು ಮಾಡುವ ಜಲಮಂಡಳಿ ಕಚೇರಿ ಮುಂಡರಗಿಯಲ್ಲಿದೆ. ಇದರ ಆವರಣ ಗಿಡಗಂಟೆ, ಕಸಕಡ್ಡಿಗಳಿಂದ ತುಂಬಿದೆ. ಅನೇಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಮೊದಲೇ ಸಿಬ್ಬಂದಿಯ ಕೊರತೆಯಿದ್ದು, ಗಿಡಗಳನ್ನು ಹಾಗೂ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ಕತ್ತಲಲ್ಲಿ ಮತ್ತು ಕಟ್ಟಡಗಳ ತುದಿ ಭಾಗದಲ್ಲಿ ಅಪಾಯದ ಅಡಿಯಲ್ಲಿ ಕೆಲಸ ಮಾಡಬೇಕಾಗಿದೆ. ಇದರಿಂದಾಗಿ ರಾತ್ರಿ ಶುದ್ಧೀಕರಣ ಘಟಕಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಇಲ್ಲಿ ಸರಿಯಾದ ದೀಪದ ವ್ಯವಸ್ಥೆ ಕಲ್ಪಿಸುವುದು ಅವಶ್ಯವಾಗಿದೆ ಎಂಬುದು ಇಲ್ಲಿನ ಕಾರ್ಮಿಕರ ಬೇಡಿಕೆ.
-ಶರಣು ಸೊಲಗಿ