ಕಲಬೆರಕೆ ಚಹಾಪುಡಿ ಮಾರಾಟ: ದಾಳಿ
ಗದಗ: ಕಲಬೆರಕೆ ಚಹಾಪುಡಿ ಮಾರಾಟದಲ್ಲಿ ತೊಡಗಿರುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಬುಧವಾರ ಉಪವಿಭಾಗಾಧಿಕಾರಿ ಇಸಾವುದ್ದೀನ ಗದ್ಯಾಳ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಉಪನಿರ್ದೇಶಕ ಶಶಿಧರ ಕುರೇರ ನೇತೃತ್ವದಲ್ಲಿ ನಗರದ ಲೋಬೋಸಾ ಫುಡ್ ಆಂಡ್ ಬೇವರೇಜಸ್ ಮೇಲೆ ದಾಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಚಹಾಪುಡಿ ತಯಾರಿಕೆಗೆ ಬಳಸಲಾಗುತ್ತಿದ್ದ ಕಚ್ಚಾ ಸಾಮಗ್ರಿ ಹಾಗೂ ತಯಾರಿಸಿಗೊಂಡು ಮಾರುಕಟ್ಟೆಗೆ ತೆರಳಲು ಸಿದ್ಧವಾಗಿದ್ದ ಚಹಾಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಚಹಾಪುಡಿಯ ಮೇಲೆ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದನ್ನು ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಡಿತರ ಅಕ್ರಮ ದಾಸ್ತಾನು: ದಾಳಿ
ಗದಗ: ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ ಜರುಗಿದೆ.
ನಗರದ ಕುಷ್ಟಗಿಯವರ ಗೋದಾಮಿನ ಹಿಂಬದಿಯಲ್ಲಿ ಸುಮಾರು 100 ಚೀಲ ಅಕ್ಕಿಯನ್ನು ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶಶಿಧರ್ ಕುರೇರ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಅಕ್ಕಿಯನ್ನು ವಶ ಪಡಿಸಿಕೊಂಡಿದ್ದಾರೆ. ಇದು ಸಾರ್ವಜನಿಕರಿಗೆ ವಿತರಿಸಬೇಕಾಗಿದ್ದ ಪಡಿತರ ಅಕ್ಕಿಯೆಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದರ ಕುರಿತು ಯಾವುದೇ ದಾಖಲೆಗಳು ಮಾಲೀಕರ ಬಳಿ ಇಲ್ಲವಾದ್ದರಿಂದ ಈ ಕುರಿತು ಕಾನೂನಿನ ರೀತಿ ಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶಶಿಧರ್ ಕುರೇರ ತಿಳಿಸಿದ್ದಾರೆ.
ಅನಾಮಧೇಯ ಶವ ಪತ್ತೆ
ಗದಗ: ನಗರದ ಭೀಷ್ಮ ಕೆರೆಯ ಹತ್ತಿರದ ಎಸ್‌ಎಸ್‌ಕೆ ಪ್ರೌಢಶಾಲೆಯ ಆವರಣದ ಬಳಿ ಬುಧವಾರ ಸಂಜೆ ಅನಮಾಧೇಯ ಸುಮಾರು 45 ವರ್ಷ ವಯಸ್ಸಿನ ಪುರುಷನ ಶವ ಪತ್ತೆಯಾಗಿದೆ. 3-4 ದಿನಗಳ ಹಿಂದೆ ಮೃತಪಟ್ಟಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ. ಸ್ಥಳಕ್ಕೆ ಶಹರ ಠಾಣೆಯ ಸಿಪಿಐ ಸಂತೋಷ ಪವಾರ ಹಾಗೂ ಪಿಎಸ್‌ಐ ಟಿ.ಮಹಾಂತೇಶ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಶವ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದು ವೈದ್ಯರಿಗೆ ಸನ್ಮಾನ
ಹೊಳೆಆಲೂರು: ದಿ. ಆರ್.ಎಸ್. ಮಡಿವಾಳರ ಗುರುಗಳ ಸ್ಮರಣಾರ್ಥ ಗ್ರಾಮದ ಕಲ್ಮೇಶ್ವರ ಸಂಯುಕ್ತ ಪ್ರೌಢಶಾಲೆಯ ರಜತ ಮಹೋತ್ಸವದ ಭವನದಲ್ಲಿ ಜು. 18ರಂದು ಮಧ್ಯಾಹ್ನ 2ಕ್ಕೆ ವಿದ್ಯಾರ್ಥಿಗಳಿಗೆ ಆರೋಗ್ಯ ಉಚಿತ ತಪಾಸಣೆ ಮತ್ತು ವೈದ್ಯರ ದಿನಾಚರಣೆ ಅಂಗವಾಗಿ ಸ್ಥಳೀಯ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.