ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ: ಕುಮಾರದೇವರು
ಮುಂಡರಗಿ: ಜ್ಞಾನ ಸಂಪತ್ತು ಜಗತ್ತಿನ ಎಲ್ಲ ಸಂಪತ್ತಿಗಿಂತ ಮಿಗಿಲಾದ ಸಂಪತ್ತು. ಈ ಸಂಪತ್ತಿಗೆ ಯಾವುದೇ ಕಳ್ಳಕಾಕರ ಭಯವಿಲ್ಲ. ಇದು ಕಳ್ಳರು ಕದಿಯಲಾರದ, ಅಣ್ಣತಮ್ಮಂದಿರು ಹಂಚಿಕೊಳ್ಳಲಾರದ ಆಸ್ತಿ ಎಂದು ಬೆಳಗಾವಿ ರುದ್ರಾಕ್ಷಿ ಮಠದ ಕುಮಾರದೇವರು ಹೇಳಿದರು.
ಅವರು ಮಂಗಳವಾರ ರಾತ್ರಿ ಮುಂಡರಗಿ ಪಟ್ಟಣದ ತೋಂಟದಾರ್ಯ ಮಠದಲ್ಲಿ ಆಷಾಢಮಾಸದ ಅಂಗವಾಗಿ ಒಂದು ತಿಂಗಳ ಕಾಲ ನಡೆಯುತ್ತಿರುವ ವಚನ ಸಂಸ್ಕೃತಿ ದರ್ಶನ ಪ್ರವಚನದಲ್ಲಿ ಮಾತನಾಡಿದರು. ಲೋಕದಲ್ಲಿ ವ್ಯಕ್ತಿ ಬೆಳಗಬೇಕಾದರೆ ಅವನಿಗೆ ಬೇಕಾದ ಮುಖ್ಯ ಸಂಪತ್ತು ಜ್ಞಾನ ಸಂಪತ್ತು. ಲೌಕಿಕ ವಿದ್ಯೆಗಳಲ್ಲಿ ಪಡೆಯುವಂತಹ ಜ್ಞಾನ ಮತ್ತು ಅಲೌಕಿಕ ವಿದ್ಯೆಗಳಲ್ಲಿ ಪಡೆಯುವಂತ ಜ್ಞಾನ. ಒಂದು ವ್ಯಕ್ತಿ ಪ್ರಜ್ಞೆ ಜ್ಞಾನ ಇನ್ನೊಂದು ಸಮಷ್ಟಿ ಪ್ರಜ್ಞೆ ಜ್ಞಾನ. ಇಂದು ವಿಜ್ಞಾನವೂ ಒಂದು ವಿಶಿಷ್ಟ ಜ್ಞಾನವಾಗಿದೆ. ವಿಜ್ಞಾನದಲ್ಲಿ ನೋಡುವುದಕ್ಕೆ ಏನುಬೇಕು, ಕೇಳುವುದಕ್ಕೆ ಏನು ಬೇಕು ಇಂತಹ ಬಾಹ್ಯ ಇಂದ್ರಿಯಗಳಿಗೆ ನೀಡುವಂತಹ ಶಕ್ತಿ ವಿಜ್ಞಾನದಲ್ಲಿದೆ ಎಂದರು.