ನಗರಸಭೆ ಸದಸ್ಯನಿಂದ ಗುಡಿಸಲು ತೆರವು: ಧರಣಿ
ಕನ್ನಡಪ್ರಭ ವಾರ್ತೆ, ಗದಗ, ಜು. 17
ಬೆಟಗೇರಿ ಭಾಗದ ವಸಂತಸಿಂಗ್ ಜಮಾದಾರ ನಗರದಲ್ಲಿನ ಗುಡಿಸಲುಗಳನ್ನು ಮುನ್ಸೂಚನೆ ನೀಡದೇ ಏಕಾಏಕಿ ಬೆಳಗಿನ ಜಾವ ನಗರಸಭಾ ಸದಸ್ಯನ ನೇತೃತ್ವದಲ್ಲಿ ನಾಶಗೊಳಿಸಿದ್ದು, ಈ ಕ್ರಮ ಖಂಡಿಸಿ ಅಲ್ಲಿನ ನಿವಾಸಿಗಳು ಬುಧವಾರ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಂಜುನಾಥ ಶಿವಪ್ಪ ಮುಳಗುಂದ ಮಾತನಾಡಿ, ಈ ಭಾಗದ ನಗರಸಭಾ ಸದಸ್ಯ ಮಂಜುನಾಥ ಹೇಮಣ್ಣ ಮುಳಗುಂದ ಬುಧವಾರ ಬೆಳಗ್ಗೆ ನಗರಸಭೆಯ ಜೆಸಿಬಿ ಬಳಸಿ ನಿವಾಸಿಗಳಿಗೆ ಯಾವುದೇ ರೀತಿಯ ಲಿಖಿತ ನೋಟಿಸ್ ಆಗಲಿ, ಈ ಕುರಿತು ಮಾಹಿತಿ ನೀಡದೇ ಅಧಿಕಾರ ದುರುಪಯೋಗ ಪಡಿಸಿಕೊಂಡು ಬಡವರ ಗುಡಿಸಲುಗಳನ್ನು ನಿರ್ಣಾಮ ಮಾಡಿ ದೌರ್ಜನ್ಯ ಎಸಗಿದ್ದು, ಇಲ್ಲಿನ ನಿವಾಸಿಗಳ ಪರವಾಗಿ ನಾವು ಇದನ್ನು ಖಂಡಿಸುತ್ತೇವೆ. ಈ ಕುರಿತು ನಗರಸಭೆಯ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸುಳ್ಳು ಹೇಳಿಕೆ ನೀಡುತ್ತಿರುವ ನಗರಸಭಾ ಸದಸ್ಯನ ಮೇಲೆ ಕ್ರಮ ಜರುಗಿಸಲು ಆಗ್ರಹಿಸುತ್ತೇವೆ ಎಂದರು.
ಈ ವೇಳೆ ಪ್ರತಿಭಟನಾಕಾರರು ನಗರಸಭೆ ಪೌರಾಯುಕ್ತ, ಅಭಿಯಂತರನ್ನು ತರಾಟೆಗೆ ತೆಗೆದುಕೊಂಡರು. ನಗರಸಭೆ ಸಿಬ್ಬಂದಿ, ನಗರಸಭೆ ಸದಸ್ಯನ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಪೌರಾಯುಕ್ತ ಮನೋಹರ ನಡುವಿನಮನಿ ಮಾತನಾಡಿ, ಜೆಸಿಬಿಯನ್ನು ಗಟಾರು, ನೈರ್ಮಲ್ಯಿಕರಣ ವ್ಯವಸ್ಥೆಗಾಗಿ ಕಳಿಸಿದ್ದು, ಗುಡಿಸಲು ತೆರವಿಗೆ ಆದೇಶ ನೀಡಿಲ್ಲ. ಈ ಭಾಗದ ನಿವಾಸಿಗಳ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.
ಕರೀಂಸಾಬ ದಂಡಿನ, ತಬರಜ ಮಕಾಂದಾರ, ಶಬ್ಬೀರ ಕುಕನೂರ, ಸತೀಶ ಕಾತರಕಿ, ಮುಸ್ತಫಾ ತಾವರಗೇರಿ, ಪುಷ್ಪಾಬಾಯಿ ಮಾಳದ, ಶರೀಫಸಾಬ ಮಜ್ಜಗಿ, ಶಾಂತವ್ವ ಕಮ್ಮಾರ, ಸಂಗೀತಾಬಾಯಿ ರಜಪೂತ, ನೀಲಾಬಾಯಿ ಜಮಾದಾರ, ಬಿಬಿಜಾನ ಕಂಪ್ಲಿ ಮುಂತಾದವರು ಪ್ರತಿಭಟನೆಯಲ್ಲಿದ್ದರು.