ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪುರಸಭೆ ಗದ್ದುಗೆಗಾಗಿ ಪೈಪೋಟಿ

Lingaraj Badiger
Updated On : 18 Jul 2013, 11:55 am

ಕನ್ನಡಪ್ರಭ ವಾರ್ತೆ, ನರಗುಂದ, ಜು. 17
ಈಚೆಗೆ ನರಗುಂದ ಪುರಸಭೆಗಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರ ಪಡೆವ ತವಕದಲ್ಲಿದೆ. ಆದರೆ, ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿದ್ದ ಬಿಜೆಪಿಯ ಸಿ.ಸಿ. ಪಾಟೀಲ ಸೋತಿದ್ದಲ್ಲದೇ ಬಿಜೆಪಿ ಸರ್ಕಾರ ಪತನವಾಗಿದೆ. ಹೀಗಾಗಿ ಪುರಸಭೆಯ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡಿದಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಆರ್. ಯಾವಗಲ್ ಗೆಲುವು ಸಾಧಿಸಿದ್ದು ಮತ್ತು ರಾಜ್ಯದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ಬಿಜೆಪಿಯಿಂದ ಅಧಿಕಾರ ಕಿತ್ತುಕೊಂಡು ಮತ್ತೆ ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆಯಲು ಪಟ್ಟಣದಲ್ಲಿ ತೆರೆಮರೆಯಲ್ಲಿ ಜೋರಾದ ಕಸರತ್ತು ನಡೆದಿದ್ದು, ನರಗುಂದದಲ್ಲಿ ಅತ್ಯಂತ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿವೆ.
ಇಬ್ಬರಲ್ಲಿಯೂ ಸಮಬಲ: ಪಟ್ಟಣದ ಪುರಸಭೆಯ 23 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ನಿಂದ 9, ಬಿಜೆಪಿಯಿಂದ 12, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಓರ್ವ ಹಾಗೂ ಸ್ವತಂತ್ರವಾಗಿ ಓರ್ವ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಬಿಎಸ್‌ಆರ್ ಕಾಂಗ್ರೆಸ್‌ನ ಓರ್ವ ಹಾಗೂ ಪಕ್ಷೇತರರಾಗಿ ಗೆದ್ದಿರುವ ಓರ್ವನ ಹಾಗೂ ಹಾಲಿ ಶಾಸಕ ಬಿ.ಆರ್. ಯಾವಗಲ್ಲರ ಒಂದು ಮತ ಸೇರಿದಲ್ಲಿ ಕಾಂಗ್ರೆಸ್ ಪಕ್ಷಕ್ಕೂ 12 ಸದಸ್ಯರ ಬಲ ಲಭ್ಯ. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನೇರವಾಗಿ ಅಧಿಕಾರದ ಚುಕ್ಕಾಣಿ ಹಂಬಲಿಸುತ್ತಿವೆ.
ಪಕ್ಷೇತರರ ಮೇಲೆ ಕಣ್ಣು: ನರಗುಂದ ಪುರಸಭೆಯಲ್ಲಿ ಪಕ್ಷೇತರರಾಗಿ ಓರ್ವ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಓರ್ವರು ಆಯ್ಕೆಯಾಗಿದ್ದು, ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪಕ್ಷೇತರರ ಮೇಲೆ ಕಣ್ಣು ಇಟ್ಟಿವೆ. ಎರಡೂ ಪಕ್ಷಗಳು ಪಕ್ಷೇತರರು ನಮ್ಮೊಟ್ಟಿಗಿದ್ದಾರೆ. ನಾವೇ ಅಧಿಕಾರ ನಡೆಸುವುದು ಖಚಿತ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಿಜೆಪಿಯಲ್ಲಿ ವಿಲೀನ ಪ್ರಕ್ರಿಯೆ ನಡೆದಿರುವುದರಿಂದ ಬಿಜೆಪಿಯೇ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಸನಿಹದಲ್ಲಿದೆ ಎನ್ನುವ ಚರ್ಚೆ ತಾಲೂಕಿನ ರಾಜಕೀಯ ವಲಯದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ.
ಮೀಸಲಾತಿಯತ್ತ ಗಮನ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿಯ ವಿಷಯ ಸರ್ಕಾರಿ ಮಟ್ಟದಲ್ಲಿದ್ದು, ಎಲ್ಲರ ಚಿತ್ತವೂ ಈಗ ಮೀಸಲಾತಿಯತ್ತ. ಅದರಲ್ಲಿಯೂ ಕಾಂಗ್ರೆಸ್ ಪರಿಸ್ಥಿತಿಯ ಲಾಭ ಪಡೆಯಲು ಜೋರಾಗಿಯೇ ಕೆಲಸ ಮಾಡುತ್ತಿದೆ. ಆಯ್ಕೆಯಾದ ಬಿಜೆಪಿಯ 12 ಸದಸ್ಯರಲ್ಲಿ ಎಸ್‌ಟಿ ಸಮುದಾಯದಿಂದ ಯಾರೂ ಇಲ್ಲ. ಹಾಗಾಗಿ ಎಸ್‌ಟಿಗೆ ಮೀಸಲಾತಿ ಪ್ರಕಟವಾದಲ್ಲಿ ಸಹಜವಾಗಿ ಅಧಿಕಾರ ಕಾಂಗ್ರೆಸ್‌ಗೆ ಸಿಗಲಿದೆ. ಇನ್ನು ಮಾಜಿ ಶಾಸಕ ಸಿ.ಸಿ. ಪಾಟೀಲ ಗುಂಡೇಟು ಪ್ರಕರಣದಿಂದ ಗಾಯಗೊಂಡು ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಇದರ ಲಾಭವನ್ನು ಪಡೆದ ಕೆಲ ಅತೃಪ್ತ ಬಿಜೆಪಿ ಸದಸ್ಯರನ್ನು ಸೆಳೆದಲ್ಲಿ ಇದೂ ಕಾಂಗ್ರೆಸ್ ಪಕ್ಷಕ್ಕೆ ವರವಾಗಲಿದೆ ಎನ್ನುವ ಲೆಕ್ಕಾಚಾರವೂ ಕೇಳಿ ಬರುತ್ತಿದೆ.

ಗುಟ್ಟು ಬಿಡದ ಸದಸ್ಯರು
ನರಗುಂದದಲ್ಲಿ ಪ್ರತಿ ದಿನವೂ ಎರಡು ಪಕ್ಷಗಳ ಸದಸ್ಯರು ಬಹು ಆತ್ಮೀಯವಾಗಿ ಕೂಡಿ ರಾಜಕಾರಣ ಮಾಡುವುದು ಇಲ್ಲಿನ ವಿಶೇಷ.  ಆಯ್ಕೆಯಾಗಿದ್ದು ಬೇರೆ ಬೇರೆ ಪಕ್ಷಗಳಿಂದಾದರೂ ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ ಎನ್ನುವ ವಿಷಯ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವರಿಷ್ಠರಿಗೆ ತೀವ್ರ ಗೊಂದಲಕ್ಕೆ ಕಾರಣವಾಗಿದೆ. ನರಗುಂದ ಸೇರಿದಂತೆ ಜಿಲ್ಲಾದ್ಯಂತ ನರಗುಂದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯೇ ಪ್ರಮುಖ ಚರ್ಚೆಯ ವಸ್ತು.
-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement