ಬಜೆಟ್‌ನಲ್ಲಿ ಹಮಾಲರು, ಕಾರ್ಮಿಕರ ನಿರ್ಲಕ್ಷ್ಯ
ಗದಗ: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ರಾಜ್ಯದ ಅಸಂಘಟಿತ ಹಮಾಲರು, ಕೂಲಿಕಾರ್ಮಿಕರ ಕುರಿತು ಯಾವುದೇ ಅಭಿವೃದ್ಧಿ ಯೋಜನೆಗೆ ಅನುದಾನ ಮೀಸಲಿಡದೆ ಇರುವುದು ವಿಷಾದನೀಯ ಎಂದು ರಾಜ್ಯ ಹಮಾಲರ ಒಕ್ಕೂಟದ ಅಧ್ಯಕ್ಷ ಅಯ್ಯಪ್ಪ ನಾಯ್ಕರ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಇಂದಿಗೂ ಅಸಂಘಟಿತ ಹಮಾಲಿ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಅಸಂಘಟಿತ ಕಾರ್ಮಿಕರು ರು. 50-60 ಸಾವಿರ ಸಾಲ ಮಾಡಿ ಎತ್ತು ತಂದು ಚಕ್ಕಡಿ ಇಟ್ಟುಕೊಂಡು ಹಮಾಲಿ ಮಾಡುತ್ತ ಜೀವನ ಮಾಡುತ್ತಿದ್ದಾರೆ. ಇವರ ಕಷ್ಟ ಪರಿಹಾರಕ್ಕೆ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ ಎಂದಿದ್ದಾರೆ. ರಾಜ್ಯದ ಸಮಸ್ತ ಅಸಂಘಟಿತ ಹಮಾಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ, ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ಪಿಂಚಣಿ ಯೋಜನೆ ತಂದು ಅದಕ್ಕಾಗಿ ರು. 1800 ಕೋಟಿ ಮೀಸಲಿರಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಹಮಾಲರು, ಶ್ರಮ ಜೀವಿಗಳಿಗಾಗಿ ಪತ್ಯೇಕ ಕಲ್ಯಾಣ ನಿಧಿ ಸ್ಥಾಪಿಸಬಹುದೆಂಬ ಭರವಸೆ ಹುಸಿಯಾಗಿದೆ. ಈಗಲಾದರೂ ಅಂತಹ ಯೋಜನೆ ರೂಪಿಸಿ, ತನ್ಮೂಲಕ ಹಮಾಲರಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.