ಮಿತಿಮೀರಿ ಔಷಧ ನೀಡಿಕೆ: 18 ಕುರಿ ಸಾವು
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 17
ಮಾಲೀಕನೆ ತನ್ನ ಕುರಿಗಳಿಗೆ ಮಿತಿಮೀರಿ ಔಷಧ ನೀಡಿದ್ದರಿಂದ 18 ಕುರಿಗಳು ಸಾವನ್ನಪ್ಪಿದ ಘಟನೆ ಸಮೀಪದ ಬಾಲೆಹೊಸೂರನಲ್ಲಿ ಬುಧವಾರ ಬೆಳಗ್ಗೆ ಜರುಗಿದೆ.
ಸಮೀಪದ ಬಾಲೆಹೊಸೂರಿನ ಕುರಿಗಾರ ನಿಂಗಪ್ಪ ಗುಡ್ಡಪ್ಪ ಕರೆಣ್ಣವರ ತನ್ನ 200 ಕುರಿಗಳು ಕೆಮ್ಮುತ್ತಿರುವುದಕ್ಕೆ ಶಿಗ್ಲಿಯ ಪಶು ಆಸ್ಪತ್ರೆಯಿಂದ ಔಷಧವನ್ನು ತಂದಿದ್ದಾನೆ. ಆಗ ಪಶು ವೈದ್ಯ ಡಾ. ಎಸ್.ಎಸ್. ಸಜ್ಜನರ, ಪ್ಲುವೀಸ್ ನ್ಯೂಕ್ಸೋವೊಮಿಕಾ ಎನ್ನುವ 500 ಗ್ರಾಂ ಪೌಡರ್ ನೀಡಿದ್ದಾರೆ. 300 ಕುರಿಗಳಿಗೆ ಒಂದು ಪಾಕೆಟ್ (500 ಗ್ರಾಂ) ಔಷಧವನ್ನು ನೀಡಬೇಕೆಂದು ತಿಳಿಸಿ ಔಷಧ ನೀಡಿದ್ದಾರೆ. ಆದರೆ, ಕುರಿಗಾರ ಒಟ್ಟು 3 ಪಾಕೆಟ್ ಔಷಧವನ್ನು ತೆಗೆದುಕೊಂಡು ಬಂದು, ಬುಧವಾರ ಬೆಳಗ್ಗೆ ತನ್ನ 200 ಕುರಿಗಳಿಗೆ ಒಮ್ಮಲೆ 2 ಪಾಕೆಟ್ ಔಷಧ ನೀಡಿದ್ದಾನೆ. ಹೀಗೆ ಮಿತಿ ಮೀರಿದ ಪ್ರಮಾಣದ ಔಷಧ ಸೇವನೆ ಮಾಡಿದ ಕೆಲ ಸಮಯದ ನಂತರ ಕುರಿಗಳು ಕಣ್ಣು ಮತ್ತು ಬಾಯಲ್ಲಿ ರಕ್ತಕಾರಿಕೊಂಡು ಒದ್ದಾಡುತ್ತಿದ್ದನ್ನು ನೋ ಡಿದ ನಿಂಗಪ್ಪ, ವೈದ್ಯರಿಗೆ ವಿಷಯ ತಿಳಿಸಿದ್ದು, ವೈದ್ಯರು ಸ್ಥಳಕ್ಕೆ ಆಗಮಿಸಿ ಉಳಿದ ಕುರಿಗಳಿಗೆ ಔಷಧೋಪಚಾರ ಮಾಡಿ ಇನ್ನುಳಿದ ಕುರಿಗಳ ಪ್ರಾಣ ಉಳಿಸಿದ್ದಾರೆ. ಕುರಿಗಾರ ತನ್ನ ತಪ್ಪಿನ ಪರಿಣಾಮ ನೆನೆದು ಬಿಕ್ಕಳಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.