ಶಿಷ್ಟಾಚಾರ ಉಲ್ಲಂಘನೆ: ಆರೋಪ
ಲಕ್ಷ್ಮೇಶ್ವರ: ಗ್ರಾಮಸಭೆಗೆ ಗ್ರಾಪಂ ವ್ಯಾಪ್ತಿಯ ಎಲ್ಲ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸುವುದು ಶಿಷ್ಟಾಚಾರವಾಗಿದೆ. ಆದರೆ, ಬಟ್ಟೂರ ಗ್ರಾಪಂನ ಪಿಡಿಓ ಇಂತಹ ಶಿಷ್ಟಾಚಾರ ಉಲ್ಲಂಘನೆ ಮಾಡಿ ಜನಪ್ರತಿನಿಧಿಗೆ ಅವಮಾನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಬಟ್ಟೂರ ಗ್ರಾಪಂ ವ್ಯಾಪ್ತಿಯ ಗ್ರಾಮಸಭೆಯು ಜು. 16ರಂದು ಅಕ್ಕಿಗುಂದ ಗ್ರಾಮದಲ್ಲಿ ಜರುಗಬೇಕಾಗಿತ್ತು. ಅಂದು ಅಕ್ಕಿಗುಂದ ತಾಂಡಾದ ನಿವಾಸಿ, ಮಾಗಡಿ ಕ್ಷೇತ್ರದ ತಾಪಂ ಸದಸ್ಯೆ ಸುಶೀಲಾಬಾಯಿ ಲಮಾಣಿ ಸಭೆಗೆ ಆಗಮಿಸಿ, ತಾಲೂಕಿನ ಎಲ್ಲ ಅಧಿಕಾರಿಗಳಿಗೆ ಹಾಗೂ ಅಕ್ಕಿಗುಂದದ ಗ್ರಾಪಂ ಸದಸ್ಯರಿಗೆ ನೋಟಿಸ್ನ್ನು ಮುಟ್ಟಿಸಲು ಸಾಧ್ಯವಾಗಿದ್ದು, ನಮಗೇಕೆ ಈ ಬಗ್ಗೆ ಮಾಹಿತಿ ನೀಡಿಲ್ಲವೆಂದು ಪ್ರಶ್ನಿಸಿದಾಗ ಗ್ರಾಪಂ ಪಿಡಿಓ ಸಮರ್ಪಕ ಉತ್ತರ ನೀಡಲು ನಿರಾಕರಿಸಿದ್ದಾರೆ. ಆಗ ಗ್ರಾಮಸಭೆ ಅಷ್ಟಕ್ಕೆ ಮೊಟಕುಗೊಳಿಸಲಾಯಿತು ಎನ್ನಲಾಗಿದೆ. ಗ್ರಾಮಸಭೆಯ ನೋಟಿಸ್ನ್ನು ನಮಗೇಕೆ ನೀಡಲಿಲ್ಲ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ತಾಪಂ ಸದಸ್ಯೆ ಪಿಡಿಓ ಅವರನ್ನು ಕೇಳಿದಾಗ ನನಗೆ ನೋಟಿಸ್ನ್ನು ಮುಟ್ಟಿಸಲು ಆಗಿಲ್ಲ. ಬೇಕಾದರೆ ನಿಮಗೆ ಲಿಖಿತ ರೂಪದಲ್ಲಿ ಉತ್ತರ ಬರೆದುಕೊಡುತ್ತೇನೆ ಎಂದು ಉತ್ತರಿಸಿ ಲಿಖಿತ ಹೇಳಿಕೆ ಬರೆದಕೊಟ್ಟಿದ್ದಾರೆ. ಈ ಕುರಿತಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯು ಕ್ರಮ ಕೈಗೊಳ್ಳಬೇಕು. ಗ್ರಾಪಂ ಪಿಡಿಓ ವಿನಾಕಾರಣ ರಾಜಕಾರಣ ಮಾಡುತ್ತಿದ್ದು, ನೋಟಿಸ್ ನೀಡದೆ ಇರಲು ಬೇರೆಯವರ ಕುಮ್ಮಕ್ಕು ಇರಬಹುದು ಎನ್ನುವ ಅನುಮಾನ ಉಂಟಾಗುತ್ತಿದೆ. ಅದಕ್ಕಾಗಿ ಇಂತಹ ಪಿಡಿಓ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.