ಮೂಢನಂಬಿಕೆಗೆ ಬಲಿಯಾದ ಎಂಜಿನಿಯರ್
ಲಕ್ಷ್ಮೇಶ್ವರ: ಕಾಗೆಯೊಂದು ತಲೆಯ ಮೇಲೆ ಬಡಿದು ಹೋಯಿತು ಎನ್ನುವ ಕಾರಣಕ್ಕಾಗಿ ಯುವಕನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಜರುಗಿದೆ.
ಲಕ್ಷ್ಮೇಶ್ವರದ ಆನಂದ ಹಂಪಣ್ಣವರ(23) ಎನ್ನುವ ದುರ್ದೈವಿ ಆತ್ಮಹತ್ಯೆ ಮಾಡಿಕೊಂಡ ಯುವಕ.ಪಟ್ಟಣದ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದ ಆನಂದ ಹಂಪಣ್ಣವರ, ಬೆಂಗಳೂರಿನ ಎಚ್‌ಎಎಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಈತನ ಅಣ್ಣ ಹಂಪಣ್ಣ ಕೂಡಾ ಬೆಂಗಳೂರಿನಲ್ಲಿ ಎಂಜಿನಿಯರ್ ವೃತಿಯಲ್ಲಿ ಬೇರೊಂದು ಕಂಪನಿಯಲ್ಲಿ ಕೆಲಸಕ್ಕೆ ಮಾಡುತ್ತಿದ್ದನು. ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಅಣ್ಣ ಹಂಪಣ್ಣ ತಂದೆಯ ಆರೋಗ್ಯ ಸರಿಯಿಲ್ಲದ ಕಾರಣ ಲಕ್ಷ್ಮೇಶ್ವರಕ್ಕೆ ಬಂದಿದ್ದನು.
ಆನಂದ, ಎಂದಿನಂತೆ ಕೆಲಸಕ್ಕಾಗಿ ಕಂಪನಿಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾಗೆಯೊಂದು ತಲೆಯ ಮೇಲೆ ಬಡಿದು ಹೋಗಿದೆ. ಸಂಜೆ ಮನೆಗೆ ಬರುವ ವೇಳೆಯಲ್ಲೂ ಮತ್ತೆ ಕಾಗೆಯು ತಲೆಯ ಮೇಲೆ ಬಡಿದು ಹೋಗಿದೆ. ಇದರಿಂದ ಕಳವಳಕ್ಕೀಡಾಗಿದ ಆನಂದ ಲಕ್ಷ್ಮೇಶ್ವರದಲ್ಲಿರುವ ತನ್ನ ತಾಯಿಗೆ ಪೋನ್ ಮಾಡಿ ನಡೆದ ಘಟನೆ ಬಗ್ಗೆ ತಿಳಿಸಿದ್ದಾನೆ. ಆಗ ತಾಯಿ ಪಾರ್ವತೆವ್ವ ಮಗನಿಗೆ ಧೈರ್ಯ ತುಂಬುವ ಕೆಲಸ ಮಾಡಿ, ಏನೂ ಆಗುವುದಿಲ್ಲ, ಸ್ನಾನ ಮಾಡಿ ಆಂಜನೇಯ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪ ಹಚ್ಚಿ ಬರಲು ತಿಳಿಸಿದ್ದಾರೆ. ಮತ್ತೆ ಅರ್ಧ ಗಂಟೆ ಬಿಟ್ಟು ತಾಯಿ ಪೋನ್ ಮಾಡಿ ವಿಚಾರಿಸಿದ್ದಾಳೆ. ಇನ್ನೂ ಹೋಗಿಲ್ಲ, ಈಗ ಹೋಗುತ್ತೇನೆ ಎಂದು ಹೇಳಿದ್ದಾನೆ. ಮತ್ತೆ ರಾತ್ರಿ ಕರೆ ಮಾಡಿದರೂ ಮೊಬೈಲ್ ಹಲವಾರು ಬಾರಿ ರಿಂಗ್ ಆದರೂ ಸ್ವೀಕರಿಸಿಲ್ಲ.
ಇತ್ತ ಅಣ್ಣ ಹಂಪಣ್ಣ ಬುಧವಾರ ರಾತ್ರಿ ಬೆಂಗಳೂರಿಗೆ ಹೊರಟಿದ್ದು, ತಮ್ಮನ ಪೋನ್‌ಗೆ ಮಾತನಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಗುರುವಾರ ಬೆಳಗ್ಗೆ ಮನೆಗೆ ಹೋದಾಗ ಮನೆಯ ಬಾಗಿಲು ತೆರೆಯುವಂತೆ ತಮ್ಮನಿಗೆ ಕೂಗಿದರೂ ಬಾಗಿಲು ತೆರೆಯದೆ ಇದ್ದಾಗ, ತನ್ನ ಬಳಿ ಇದ್ದ ಇನ್ನೊಂದು ಕೀಲಿಯಿಂದ ಬಾಗಿಲು ತೆರೆದಿದ್ದಾನೆ. ಒಳಗೆ ತಮ್ಮ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು. ಪಕ್ಕದ ಮನೆಯವರ ನೆರವಿನಿಂದ ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದ್ದಾನೆ. ಅಷ್ಟರಲ್ಲಾಗಲೆ ಮೃತನಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಎಂಜಿನಿಯರ್‌ನೋರ್ವನು ಮೂಢನಂಬಿಕೆಗೆಗೆ ಬಲಿಯಾಗಿರುವುದು ದುರಂತವೇ ಸರಿ.