ಹೈನುಗಾರಿಕೆ ಸಂಸ್ಥೆಯಿಂದ ಮೋಸ: ಆಕ್ರೋಶ
ಕನ್ನಡಪ್ರಭ ವಾರ್ತೆ, ರೋಣ, ಜು. 19
ಪಟ್ಟಣದ ಮುಲ್ಲಾನಬಾವಿ ಹತ್ತಿರ ಆರಂಭಗೊಂಡಿದ್ದ ಕರ್ನಾಟಕ ರಾಜ್ಯ ಹೈನುಗಾರಿಕೆ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವಂಚಿಸಿದೆ ಎಂದು ಆರೋಪಿಸಿ, ಕೆಲವರು ಕಚೇರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆದಿದೆ.
ಹೈನುಗಾರಿಕೆಗೆ ಸಾಲ ನೀಡುವುದಾಗಿ ಹೇಳಿ ತಾಲೂಕಿನ ಹಲವಾರು ಗ್ರಾಮಗಳ ಮಹಿಳೆಯಿಂದ ಹಣ ತುಂಬಿಸಿಕೊಂಡು, ಅದಕ್ಕೆ ಸೂಕ್ತ ದಾಖಲೆ ನೀಡಲು ಸಂಸ್ಥೆ ವಿಫಲವಾಗಿದೆ. ಇದು ಮೋಸದ ಕಂಪನಿ ಎಂದು ಕೆಲವರು ಗಂಭೀರ ಆರೋಪ ಮಾಡಿದ್ದಾರೆ.
ಡಿಸೆಂಬರ್ 2012ರಲ್ಲಿ ಆರಂಭಗೊಂಡ ಈ ಸಂಸ್ಥೆ, ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿ ಅನೇಕ ಮಹಿಳೆಯರಿಗೆ ಆಮಿಷ ತೋರಿಸಿದೆ. ನಿಮಗೆ ಸಂಸ್ಥೆಯಿಂದ ಹೈನುಗಾರಿಕೆ ನಡೆಸಲು ಹಸುಗಳನ್ನು ಒದಗಿಸಲಾಗುವುದು ಎಂದು ಹೇಳಿ ಒಟ್ಟು 600 ಕ್ಕೂ ಹೆಚ್ಚು ಮಹಿಳೆಯರಿಂದ ರು. 250ಗಳಂತೆ ಸಂಗ್ರಹಿಸಿದೆ. ತಾಲೂಕಿನ ಮೇಗೂರ ಗ್ರಾಮದ ಅನೇಕ ಮಹಿಳೆಯರು ಈ ಸಂಸ್ಥೆಯಲ್ಲಿ ಹಣ ಕಟ್ಟಿದ್ದಾರೆ. ಅದೇ ರೀತಿ ಶುಕ್ರವಾರವೂ ಹಣ ಕಟ್ಟಲು ಕಚೇರಿಗೆ ಆಗಮಿಸಿದ್ದರು. ಅದೇ ಸಮಯದಲ್ಲಿ ಪಟ್ಟಣದ ಶೇಖಪ್ಪ ಎಂಬವರು ಸಂಸ್ಥೆಯ ದಾಖಲೆ ತೋರಿಸುವಂತೆ ಒತ್ತಾಯಿಸಿದ್ದಾರೆ.
ಅದರಿಂದ ಗಾಬರಿಗೊಂಡ ಸಂಸ್ಥೆಯ ಮಾರುತಿ ಜಮಿನ್ದಾರ್ ಮತ್ತು ರಮೇಶ ಗಾಡಗೊಳಿ, ದಾಖಲೆಗಳು ಬದಾಮಿಯ ಕಚೇರಿಯಲ್ಲಿ ಇವೆ ಎಂದಿದ್ದಾರೆ. ಅಲ್ಲಿಂದ ದಾಖಲೆಗಳನ್ನು ತರಿಸುವಂತೆ ಹಣ ತುಂಬಲು ಬಂದ ಮಹಿಳೆಯರು, ಪಟ್ಟಣದ ಅನೇಕ ಯುವಕರು ಪಟ್ಟು ಹಿಡಿದಿರು. ಅದರಿಂದ ಸಿಬ್ಬಂದಿ ತೀವ್ರ ಗಲಿಬಿಲಿಗೊಂಡರು. ಸಿಬ್ಬಂದಿ ಈ ವರ್ತನೆಯಿಂದ ಸಾರ್ವಜನಿಕರು ಇನ್ನಷ್ಟು ಸಂಶಯಗೊಂಡರು.
ಹೈನುಗಾರಿಕೆಗೆ ಹಸು: ಸಂಸ್ಥೆಯ ನಿಯಮದಂತೆ ಮೊದಲು ರು. 250 ಭರಿಸಿ ಸದಸ್ಯರಾಗಬೇಕು. ಸದಸ್ಯರಾದವರು ಇನ್ನಷ್ಟು ಸದಸ್ಯರ ಹೆಸರು ಸೂಚಿಸಬೇಕು. ಅಂಥವರಿಗೆ ಹೈನುಗಾರಿಕೆ ಮಾಡಲು ಹಸುಗಳನ್ನು ನೀಡಲಾಗುವುದು, ಅಲ್ಲದೆ ಸಾಲವನ್ನೂ ನೀಡಲಾಗುವುದು. ಆದರೆ ಸಾಲವನ್ನಾಗಲಿ, ಹಸುಗಳನ್ನಾಗಲಿ ರೋಣದಲ್ಲಿ ನೀಡುವುದಿಲ್ಲ. ಗ್ರಾಮದಲ್ಲಿಯೇ ನೀಡಲಾಗುವುದು. ಪಡೆದ ಸಾಲವನ್ನು ಮೂರು ವರ್ಷಗಳಲ್ಲಿ ತೀರಿಸಬೇಕು ಎಂದು ಹೇಳಿದ್ದರು. ಹೀಗಾಗಿ ನಾವು ಹಣ ತುಂಬಿದ್ದೇವೆ ಎಂದು ಶಾಂತವ್ವ ಧರ್ಮಾಯತ, ಹನಮವ್ವ ಬಳಗಾನೂರ ಸೇರಿದಂತೆ ಅನೇಕರು ವಿವರಣೆ ನೀಡಿದ್ದಾರೆ.
ಆಕ್ರೋಶ: ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಸಂಸ್ಥೆಯ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅದರಿಂದ ಕಂಗಾಲಾದ ಸಿಬ್ಬಂದಿ, ತುಂಬಿದ ಹಣವನ್ನು ವಾಪಸ್ ನೀಡಲಾಗುವುದು. ನಮ್ಮನ್ನು ಏನು ಮಾಡಬೇಡಿ ಎಂದು ವಿನಂತಿಸಿಕೊಂಡರು. ಪಟ್ಟಣದ ಕೆಲ ಮುಖಂಡರು ಸ್ಥಳಕ್ಕೆ ಆಗಮಿಸಿ, ಮಧ್ಯಸ್ಥಿಕೆ ವಹಿಸಿ ವಾತಾವರಣ ತಿಳಿಗೊಳಿಸಿದರು. ರೇಣುಕಾ ಹೂಗಾರ, ಅಕ್ಕಮ್ಮಾ ಬಳಗಾನೂರ, ಸಂಗನಗೌಡ ಪೊಲೀಸ್ಪಾಟೀಲ್, ಸುಲೋಚನಾ ಸಾಲಿಮಠ, ಶಾಂತವ್ವ ಧರ್ಮಾಯತ, ರೇಣವ್ವ ನವಲಗುಂದ ಹಾಗೂ ನೂರಾರು ಮಹಿಳೆಯರು ಹಾಜರಿದ್ದರು.