ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್ ವಿರುದ್ಧ ವಿಜಯ ಕುಲಕರ್ಣಿ ಕಿಡಿ

Vishwanath S
Updated On : 21 Jul 2013, 11:20 am

ನರಗುಂದ:  ರಾಜ್ಯ ಮತ್ತು ಕೇಂದ್ರದ ಕಾಂಗ್ರೆಸ್ ಪಕ್ಷದವರು ಈ ಭಾಗದ ರೈತ ಸಮುದಾಯಕ್ಕೆ ದಿನಕ್ಕೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಈ ಕಾಂಗ್ರೆಸ್ ಪಕ್ಷದವರಿಗೆ ನಾಲಿಗೆ ಎಷ್ಟು ಇವೆ ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆರೋಪಿಸಿದರು.  ಅವರು ಶನಿವಾರ ಪಟ್ಟಣದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸತತ ಬರಗಾಲದಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಮಲಪ್ರಭಾ ಜಲಾಶಯಕ್ಕೆ ಕಳಸಾ ಬಂಡೂರಿ ನಾಲಾಗಳ ಹಳ್ಳಗಳ ಮುಖಾಂತರ 7 ಟಿಎಂಸಿಗಿಂತ ಹೆಚ್ಚಿಗೆ ನೀರು ತರುವ ಕಾಮಗಾರಿ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ. ಈಗ ಈ ಭಾಗದ ಶಾಸಕ ಬಿ.ಆರ್. ಯಾವಗಲ್ಲ ಕಳಸಾ ಹಳ್ಳದ ಮೂಲಕ ಮಲಪ್ರಭಾ ಜಲಾಶಯಕ್ಕೆ ನೀರು ಬರಲು ಸಾಧ್ಯವಿಲ್ಲ. ಈ ಹಳ್ಳದಲ್ಲಿ ನೀರು ಇಲ್ಲ. ಕೇವಲ ಈ ಭಾಗದ ರೈತರನ್ನು ದಾರಿ ತಪ್ಪಿಸಲು ಕೆಲ ಹೋರಾಟಗಾರರು ನಾಟಕ ಮಾಡುತ್ತಿದ್ದಾರೆಂದು ಹೇಳಿದ್ದು ಖಂಡನೀಯ. ಹಾಗಾದರೆ ಈ ಶಾಸಕರು ಈ ಹಿಂದೆ 4 ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಯಾಕೆ ಮಹಾದಾಯಿ ತಿರುವು ಯೋಜನೆಗೆ ಹೋರಾಟ ಮಾಡಿ, ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಿಲ್ಲ. ಕೇವಲ ಪತ್ರಿಕೆ ಮೂಲಕ ನಾನು ರೈತರ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇನೆಂದು ಸುಳ್ಳು ಹೇಳುತ್ತಿದ್ದಾರೆಂದು ಆರೋಪಿಸಿದರು. ಈ ಹಿಂದೆ ಪಕ್ಕದ ಗೋವಾ ರಾಜ್ಯದ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕ ರಾಜ್ಯಕ್ಕೆ ಮಹಾದಾಯಿಂದ ಒಂದು ಹನಿ ನೀರು ಕೊಡುವುದಿಲ್ಲವೆಂದು ಹೇಳಿದ್ದು, ಅವರ ಪಕ್ಷದ ಶಾಸಕರು ಈಗ ಈ ರೀತಿಯಲ್ಲಿ ಮಾತನಾಡುವುದನ್ನು ನೋಡಿದಲ್ಲಿ ಅವರ ಪಕ್ಷದವರಿಗೆ ಎಷ್ಟು ನಾಲಿಗೆ ಇವೆ ಎನ್ನುವುದೇ ತಿಳಿಯದಾಗಿದೆ ಎಂದು ಲೇವಡಿ ಮಾಡಿದರು. ಬಸನಗೌಡ ಚಿಕ್ಕನಗೌಡರ, ಅಣ್ಣಪ್ಪಗೌಡ ಪಾಟೀಲ, ಚಳಪ್ಪ ನಾಯ್ಕರ, ಅಲ್ಲಿಸಾಬ ನದಾಫ್ ಮುಂತಾದವರು ಹಾಜರಿದ್ದರು.

ಇಂದು ಸಮ್ಮೇಳನ
ಗದಗ:  ಸೇವಾ ನಿಯಮಾವಳಿ ಹಾಗೂ ಕನಿಷ್ಠ ಕೂಲಿ ನಿಗದಿಗೆ ಆಗ್ರಹಿಸಿ ಗದಗ ತಾಲೂಕು ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನವನ್ನು ಜು. 21 ರಂದು ನಗರದ ಗುರು ಭವನದಲ್ಲಿ ಏರ್ಪಡಿಸಲಾಗಿದೆ.   ರಾಜ್ಯ ಉಪಾಧ್ಯಕ್ಷೆ ಬಿ. ಮಹದೇವಮ್ಮ, ಜಿಲ್ಲಾ ಅಧ್ಯಕ್ಷೆ ಯಶೋದಾ ಬೆಟಗೇರಿ, ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಸ್. ಹಡಪದ ಕಾರ್ಯದರ್ಶಿ ವಿಠ್ಠಲ ನಾಯ್ಕ ಆಗಮಿಸುವರೆಂದು ಸಿಐಟಿಯು ತಾಲೂಕು ಅಧ್ಯಕ್ಷೆ ನಿರ್ಮಲಾ ದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾದ್ಯಂತ ತುಂತುರು ಮಳೆ
ಗದಗ:  ಜಿಲ್ಲೆಯಾದ್ಯಂತ ಶುಕ್ರವಾರ ಬೆಳಗಿನಿಂದ ತೀವ್ರ ಮೋಡ ಕವಿದ ವಾತಾವರಣ ಉಂಟಾಗಿದೆ. ಆದರೆ, ರಭಸದ ಮಳೆ ಮಾತ್ರ ಸುರಿಯುತ್ತಿಲ್ಲ. ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಿದೆ.

ಇಂದು ಭೈರನಹಟ್ಟಿಯಲ್ಲಿ ಶಿವಾನುಭವ ಕಾರ್ಯಕ್ರಮ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆಯ 216ನೇ ಮಾಸಿಕ ಶಿವಾನುಭವ ಹಾಗೂ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಜು. 21 ರ ಸಂಜೆ 7.30ಕ್ಕೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಸಾನ್ನಿಧ್ಯವನ್ನು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ವಹಿಸುವರು. ಶಾಸಕ ಬಿ.ಆರ್. ಪಾಟೀಲ, ಮಹೇಶ ಹಂಗನಕಟ್ಟಿ, ಶಹಜಾನ ಮುದಕವಿ, ಶಂಕ್ರಣ್ಣ ಅಂಗಡಿ, ಎಸ್.ಬಿ. ಅರ್ಜುನಗಿ ಮುಂತಾದವರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಇಂದು ಶರಣ ಸಂಗಮ
ಗದಗ: ಜು.  21ರ  ಬೆಳಗ್ಗೆ  10.30ಕ್ಕೆ ಶಿವಾನಂದ ನಗರದ ಬಸವ ಮಂಟಪದಲ್ಲಿ ನಡೆಯಲಿರುವ ಬಸವದಳದ 1029ನೇ ಶರಣ ಸಂಗಮದಲ್ಲಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಬಿ. ಲಿಂಗದಾಳ ವಹಿಸುವರು. ಉಪನ್ಯಾಸಕರಾಗಿ ಎಂ.ಎ. ಹಂಚಿನಾಳ ಹಾಗೂ ಗಿರಿಜಕ್ಕ ಧರ್ಮರಡ್ಡಿ ಆಗಮಿಸುವರು. ಅತಿಥಿಗಳಾಗಿ ವಿವಿಧ ಸಮಾಜದ ಮುಖಂಡರು ಆಗಮಿಸುವರು ಎಂದು ಪ್ರಕಾಶ ಅಸುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

24ಕ್ಕೆ ಪೂರ್ವಭಾವಿ ಸಭೆ
ಹೊಳೆಆಲೂರ: ಗದಗ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ತಿನ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಜು. 24 ರಂದು 4 ಗಂಟೆಗೆ ನಗರದ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕರೆಯಲಾಗಿದೆ. ಸಭೆಯಲ್ಲಿ 2013-14ನೇ ಸಾಲಿನಲ್ಲಿ ನಡೆಸಬಹುದಾದ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಮತ್ತು ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು. ಪರಿಷತ್ತಿನ ಎಲ್ಲ ಪದಾಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ಎಂದು ಪ್ರೊ. ಆರ್.ಎಲ್. ಪೊಲೀಸ್ಪಾಟೀಲ ಹೇಳಿದರು.

ಶರಣರ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ
ಗದಗ: ಈಚೆಗೆ ಬಳಗಾನೂರಿನಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ 2013-14ನೇ ಸಾಲಿನ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಚಿಕೇನಕೊಪ್ಪದ ಚನ್ನವೀರ ಶರಣರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ, ಬಾಲಕಿಯರ ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾದರು. ಬಾಲಕಿಯರ ಗುಂಪು ಆಟಗಳಲ್ಲಿ ಖೋಖೋ ಪ್ರಥಮ, ಕಬಡ್ಡಿ ಪ್ರಥಮ, ವ್ಹಾಲಿಬಾಲ್ ಪ್ರಥಮ, ಥ್ರೋಬಾಲ್ ಪ್ರಥಮ, 100್ಢ4 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ಗುಂಪು ಆಟಗಳಲ್ಲಿ 100್ಢ4 ರಿಲೇ ಪ್ರಥಮ, ಥ್ರೋಬಾಲ್ ಪ್ರಥಮ, ವ್ಹಾಲಿಬಾಲ್ ದ್ವಿತೀಯ, ಕಬಡ್ಡಿ ದ್ವಿತೀಯ, ಖೋಖೋ ದ್ವಿತೀಯ ಸ್ಥಾನ. ಬಾಲಕಿಯರ ವೈಯುಕ್ತಿಕ ಕ್ರೀಡಾಕೂಟದಲ್ಲಿ ಲಕ್ಷ್ಮೀ ಹಂಚಿನಾಳ 100 ಮೀ. ಓಟದಲ್ಲಿ ಪ್ರಥಮ, 200 ಮೀ. ದ್ವಿತೀಯ, ಚೈತ್ರಾ ಹಡಪದ ಗುಂಡು ಮತ್ತು ಚಕ್ರ ಎಸೆತದಲ್ಲಿ ಪ್ರಥಮ. ಮಹಾಲಕ್ಷ್ಮೀ ಕೊಪ್ಪಣ್ಣವರ 600 ಮೀ. ಪ್ರಥಮ ಸ್ಥಾನ. ಅಮೃತಾ ದೇಸಾಯಿ 100 ಮೀ, 200 ಮೀ. ಓಟದಲ್ಲಿ ತೃತೀಯ. ಮೀನಾಕ್ಷಿ ಮಡಿವಾಳರ ಎತ್ತರ ಜಿಗಿತ ದ್ವೀತಿಯ. ಅಶ್ವಿನಿ ಕುಲಕರ್ಣಿ 400 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ವೈಯುಕ್ತಿಕ ವಿಭಾಗಗಳಲ್ಲಿ ಯಲ್ಲಪ್ಪ ಹಿತ್ತಲಮನಿ 100 ಮೀ. ಓಟದಲ್ಲಿ 200 ಮೀ ಹಾಗೂ ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ವಯಕ್ತಿತ ವೀರಾಗ್ರಣಿ ಪ್ರಶಸ್ತಿ ಪಡೆದನು. ಲಿಂಗರಾಜ ಚಗರಡ್ಡಿ ಉದ್ದಜಿಗಿತದಲ್ಲಿ ದ್ವಿತೀಯ, ಮಾಬುಸಾಬ ಮಸೂತಿ 400 ಮೀ. ದ್ವಿತೀಯ. ಕರಬಸಪ್ಪ ಬಸಾಪುರ 400 ಮೀ. ಓಟದಲ್ಲಿ ಪ್ರಥಮ. ಶಿವರಾಜ ಗಡಗಿ ಗುಂಡು ಎಸೆತದಲ್ಲಿ ದ್ವೀತಿಯ. ಶಿವಕುಮಾರ ಗಾಣಿಗೇರ 100 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಸಮಗ್ರ ವೀರಾಗ್ರಣಿ ಪ್ರಶಸ್ತಿ ಗಳಿಸಿ ಶಾಲೆಗೆ ಕೀರ್ತಿ ತಂದ ಬಾಲಕ, ಬಾಲಕಿಯರಿಗೆ ಸಂಸ್ಥೆಯ ಅಧ್ಯಕ್ಷ ಶಿವಶಾಂತವೀರ ಶ್ರೀಗಳು, ಕಾರ್ಯಾಧ್ಯಕ್ಷ ಎಂ.ಬಿ. ಸಿಕ್ಕೇದೇಸಾಯಿ, ಕಾರ್ಯದರ್ಶಿ ಶೇಖಣ್ಣ ಗದ್ದಿಕೇರಿ, ಆಡಳಿತಾಧಿಕಾರಿ ಎಸ್.ಆರ್. ಹಳ್ಳೂರ, ಪ್ರಧಾನ ಗುರುಮಾತೆ ಆರ್.ಎನ್. ಮಲ್ಲಾಪುರ, ದೈಹಿಕ ಶಿಕ್ಷಕ ಎಸ್.ಎಸ್. ಗುಳೇದಗುಡ್ಡ, ಎಸ್.ಎಚ್. ಬಚನಳ್ಳಿ, ಸಂಸ್ಥೆ ಸಿಬ್ಬಂದಿ ಮಕ್ಕಳನ್ನು ಅಭಿನಂದಿಸಿದ್ದಾರೆ.

ಪುಸ್ತಕ ಬಿಡುಗಡೆ
ಗದಗ: ನಗರದ ವಿದ್ಯಾದಾನ ಗಂಡು ಮಕ್ಕಳ ಪ್ರೌಢ ಶಾಲೆಯಲ್ಲಿ ಈಚೆಗೆ ನಡೆದ ಸುಸ್ಥಿರ ಶ್ರೇಣಿಕೃತಿ ಮೌಲ್ಯಾಧಾರಿತ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಮೌಲ್ಯಾಧಾರಿತ ಶಿಕ್ಷಣ ಕುರಿತ ಧ್ಯೇಯೋದ್ದೇಶ ಮತ್ತು ಕಾರ್ಯಕ್ರಮಗಳ ರೂಪಿಸುವಿಕೆ, ಯೋಜನೆ ಕುರಿತಾದ ಪುಸ್ತಕವನ್ನು  ಬಿಡುಗಡೆಗೊಳಿಸಿದರು. ಪಿ.ಎ. ಕುಲಕರ್ಣಿ ಮತ್ತು ಶಿಕ್ಷಕಿ ನೂರಜಹಾನ್ ಶೇಖ ಮುಂತಾದವರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement