ಗ್ರಾಮಸ್ಥರಿಂದ ಅಧಿಕಾರಿಗಳ ತರಾಟೆ
ಕನ್ನಡಪ್ರಭ ವಾರ್ತೆ, ಗದಗ, ಜು. 20
ಅಸಮರ್ಪಕ ಮಾಹಿತಿಯೊಂದಿಗೆ ಆಗಮಿಸಿದ ಅಧಿಕಾರಿಗಳನ್ನು ಗ್ರಾಮಸಭೆಯಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ನಡೆದಿದೆ.
ಅಡವಿಸೋಮಾಪುರ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜರುಗಿದ ಗ್ರಾಪಂನ 2013-14ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ಗ್ರಾಮಸ್ಥರು ಬಿಸಿ ಮುಟ್ಟಿಸಿದರು.
ಗ್ರಾಮಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ 15 ದಿನಗೊಳಗಾಗಿ ಉತ್ತರಿಸುವಂತೆ ಮತ್ತು ಸಭೆಯಲ್ಲಿ ಚರ್ಚೆಗೊಳಗಾದ ವಿಷಯಗಳ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ತಿಳಿಸದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳಬೇಕೆಂದು ನೋಡಲ್ ಅಧಿಕಾರಿಗಳಿಗೆ ಆಗ್ರಹಿಸಿದರು. ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಹಾಗೂ ಮೈದಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಗಲೀಜಾಗಿದ್ದು, ಅದನ್ನು ಮಕ್ಕಳ ಸದುಪಯೋಗಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪ್ರೌಢಶಾಲೆಯ ಶಿಕ್ಷಕರು, ಪಾಲಕರು ಸಭೆಯಲ್ಲಿ ತಿಳಿಸಿದರು.
ಹಲವಾರು ಬಾರಿ ವಿದ್ಯುತ್ ಕಂಬಗಳನ್ನು ಬದಲಾಯಿಸಿ ಹೊಸ ಕಂಬಗಳನ್ನು ಹಾಕುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಸಮರ್ಪಕ ಉತ್ತರ ನೀಡುವಂತೆ ಲಕ್ಕುಂಡಿಯ ಹೆಸ್ಕಾಂ ಶಾಖಾಧಿಕಾರಿ ಎಂ.ಎಚ್. ದೊಡ್ಡಮನಿ ಅವರನ್ನು ಸಾರ್ವಜನಿಕರು ಒತ್ತಾಯಿಸಿದರು. ಪಶುವೈದ್ಯಾಧಿಕಾರಿ ಭರತಭೂಷಣ ಅವರಿಗೆ ವಾರದಲ್ಲಿ ಎರಡು ಬಾರಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಲಾಯಿತು. ಸಭೆಗೆ ಆಗಮಿಸಿದ ಎಲ್ಲ ಅಧಿಕಾರಿಗಳು ತಮ್ಮ ಇಲಾಖೆಯ ಸೌಲಭ್ಯಗಳನ್ನು ತಿಳಿಸಿದರು. ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.
ನೋಡಲ್ ಅಧಿಕಾರಿಯಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಪಿಡಶೆಟ್ಟಿ, ತಾಪಂ ಸದಸ್ಯ ಪ್ರಹ್ಲಾದ ಹೊಸಳ್ಳಿ, ಪಿಡಿಓ ಬಿ.ವಿ. ತಿಮ್ಮಾಪುರ, ಸಹಾಯಕ ಕೃಷಿ ಅಧಿಕಾರಿ ಎಂ.ಎಸ್. ಹಿರೇಮಠ, ತೋಟಗಾರಿಕೆ ಸಹಾಯಕ ಅಧಿಕಾರಿ ಬಿ.ಟಿ. ಕಿತ್ತೂರ, ಪಾಪನಾಶಿಯ ಪಶುವೈದ್ಯಾಧಿಕಾರಿ ಆರೋಗ್ಯ ಸಹಾಯಕ ಸಿ.ಆರ್. ಹೆಬ್ಬಳ್ಳಿ, ಎಸ್.ಎನ್. ಲಿಂಗದಾಳ, ಸಹಾಯಕ ಕೃಷಿ ಅಧಿಕಾರಿ ಎಸ್.ಬಿ. ಸೂಡಿ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಸರಸ್ವತಿ ಗಜಕೋಶ, ಬಿ.ಎಚ್. ಚಕ್ರಣ್ಣವರ, ಎಸ್.ಎಚ್. ದಂಡಿಗದಾಸರ, ಗ್ರಾಮಲೆಕ್ಕಾಧಿಕಾರಿ ಎಸ್.ಐ. ಸತ್ತಿಗೇರಿ, ಆರ್.ಎಂ. ಶೇಷಗಿರಿ, ಲಕ್ಷ್ಮಣ ದೊಡ್ಡಮನಿ, ಉಪಾಧ್ಯಕ್ಷೆ ನಾಗವ್ವ ಹುಡೇದ ಮುಂತಾದವರು ಉಪಸ್ಥಿತರಿದ್ದರು. ತುಕಾರಾಮ ಹುಲಗಣ್ಣವರ ಸ್ವಾಗತಿಸಿ, ವಂದಿಸಿದರು.