ಅಪೂರ್ಣ ಕಾಮಗಾರಿ ಶೀಘ್ರ ಮುಗಿಸಿ
ಕನ್ನಡಪ್ರಭ ವಾರ್ತೆ, ಗದಗ, ಜು. 21
ನಗರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳಲ್ಲಿ ಕೆಲವು ಮಾರ್ಪಾಡುಗಳನ್ನು ಕೈಗೊಳ್ಳುವ ಮೂಲಕ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಭಾನುವಾರ ನಗರದಲ್ಲಿನ ಜಿಲ್ಲಾ ಸಾಹಿತ್ಯ ಭವನ, ರಂಗಮಂದಿರ, ಅಂಬೇಡ್ಕರ್ ಭವನ ಹಾಗೂ 111 ಅಡಿಯ ಬಸವೇಶ್ವರ ಮೂರ್ತಿಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.
ರು. 5 ಕೋಟಿಗಳಲ್ಲಿ ನಗರದಲ್ಲಿ ನಿರ್ಮಿಸುತ್ತಿರುವ ಜಿಲ್ಲಾ ಸಾಹಿತ್ಯ ಭವನದ ಕಾಮಗಾರಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಸಂಬಂಧಿಸಿದ ಅಭಿಯಂತರರಿಗೆ ಸೂಚಿಸಿದ ಅವರು, ಸಾಹಿತ್ಯ ಭವನ ಎಂದರೆ ಜಿಲ್ಲೆಯಲ್ಲಿನ ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಮಂದಿರವಾಗಬೇಕು. ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ರಂಗಶಂಕರ ಮಾದರಿಯಲ್ಲಿಯೇ ಈ ಜಿಲ್ಲಾ ಸಾಹಿತ್ಯ ಭವನವನ್ನು ನಿರ್ಮಿಸಿ, ಜಿಲ್ಲೆಯಲ್ಲಿರುವ ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವಂತಹ ಚಿತ್ರ, ಶಿಲ್ಪವನ್ನು ನಿರ್ಮಿಸುವ ಮೂಲಕ ಜಿಲ್ಲೆಯಲ್ಲಿನ ಸಾಹಿತ್ಯ, ಸಂಸ್ಕೃತಿಯ ಪರಿಚಯವನ್ನು ಮಾಡಿಸುವ ಕಾರ್ಯವಾಗಬೇಕಾಗಿದ್ದು, ಇದಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಅಭಿಯಂತರರಿಗೆ ಸೂಚಿಸಿದರು.
ನಂತರ ರು. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಂಗಮಂದಿರವನ್ನು ವೀಕ್ಷಿಸಿ, ಶೀಘ್ರಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಬಳಿಕ ರು. 3.10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅಂಬೇಡ್ಕರ್ ಭವನವನ್ನು ವೀಕ್ಷಿಸಿದ ಸಚಿವ ಪಾಟೀಲ, ಈ ಭವನವನ್ನು ಕೇವಲ ಸಾಮಾನ್ಯ ಮಳಿಗೆಯಂತೆ ನಿರ್ಮಿಸಲಾಗುತ್ತಿದೆ. ಆದ್ದರಿಂದ ಇಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ನಗರದ ಭೀಷ್ಮಕೆರೆಯಲ್ಲಿ ನಿರ್ಮಾಣವಾಗುತ್ತಿರುವ 111 ಅಡಿಯ ಬಸವೇಶ್ವರ ಮೂರ್ತಿಯ ಕಾಮಗಾರಿ ವೀಕ್ಷಿಸಿ, ಅದನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಗದಗ ಹೊಸ ಬಸ್‌ನಿಲ್ದಾಣ ವೀಕ್ಷಿಸಿದ ಸಚಿವರು ಅಲ್ಲಿನ ಅಸಮರ್ಪಕ ಮೂಲ ಸೌಕರ್ಯ, ಅವ್ಯವಸ್ಥೆ, 2005ರಲ್ಲಿ ಉದ್ಘಾಟನೆಗೊಂಡ ಹೊಸ ಬಸ್ ನಿಲ್ದಾಣವು ಈಗ ಸಂಪೂರ್ಣ ಹಾಳುಕೊಂಪೆಯಾಗಿ ಮಾರ್ಪಟ್ಟಿದ್ದನ್ನು ಕಂಡು ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಮರ್ಪಕ ಮೂಲ ಸೌಲಭ್ಯಗಳ ಪೂರೈಕೆಗೆ ಹೆಚ್ಚಿನ ಆದ್ಯತೆ, ಬಸ್ ನಿಲ್ದಾಣದ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಎಸ್.ಟಿ.ಅಂಜನ್‌ಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬನಶಂಕರಿ ಅಂಗಡಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಿ.ಆರ್. ಬಳ್ಳಾರಿ, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶ್ರೀನಿವಾಸ ಹಡಪದ, ವಿವಿಧ ಅಧಿಕಾರಿಗಳು ಇದ್ದರು.