ರೈತ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು
ಮುಂಡರಗಿ: ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಮುಂಡರಗಿಯಲ್ಲಿ ಭಾನುವಾರ ನಡೆದ ರೈತರ ಬೃಹತ್ ಸಮಾವೇಶದಲ್ಲಿ 19 ನಿರ್ಣಯಗಳು ಕೈಗೊಳ್ಳಲಾಗಿದೆ.
1) ರಾಜ್ಯ ಸರ್ಕಾರ ಈ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ರೈತರ ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಕುರಿತು ಕೃಷಿ ಬೆಲೆ ಆಯೋಗ ರಚನೆ ಸ್ವಾಗತಾರ್ಹ. ಆದರೆ, ಈ ಆಯೋಗವು ಕೇವಲ ಬೆಲೆ ನಿಗದಿಗಾಗಿ ವರದಿ ನೀಡಿದರೆ ಇದರಿಂದ ರೈತರಿಗೆ ಪೂರ್ಣ ಪ್ರಮಾಣದ ನ್ಯಾಯ ದೊರೆಕುವುದಿಲ್ಲ. ಈ ಆಯೋಗವು ಕೃಷಿ ಕುಟುಂಬವನ್ನು ಒಂದು ಘಟಕ ಎಂದು ಪರಿಗಣಿಸಿ, ಕೃಷಿಕರ ಜೀವನ ನಿರ್ವಹಣೆ ಅಗತ್ಯತೆಗಳು ಮತ್ತು ಅದರ ಭವಿಷ್ಯದ ದೃಷ್ಟಿಯಿಂದ ಅವರಿಗೆ ಬೇಕಾದ ಆರ್ಥಿಕ ಸದೃಢತೆ ಒದಗಿಸಿಕೊಡುವಂತಹ ಆಯೋಗವಾಗಿ ಕೆಲಸ ಮಾಡಬೇಕು. ಈ ಕಾರಣ ಕೃಷಿಕರ ವೇತನದ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಮಾವೇಶದ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
2) ಈ ಬಜೆಟ್ನಲ್ಲಿ ನೀರಾವರಿಗಾಗಿ ಮೀಸಲಿರಿಸುವಂತಹ ಹಣ ಅತ್ಯಂತ ದೊಡ್ಡ ಮೊತ್ತದ್ದೇನೂ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಮಾವೇಶವು ಬಜೆಟ್ನಲ್ಲಿ ನಮೂದಿಸಿ ಘೋಷಿಸಿರುವ ಹಣವನ್ನು ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಎಲ್ಲ ಅಗತ್ಯ ಯೋಜನೆಗಳನ್ನು ಬದ್ಧತೆಯಿಂದ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಒತ್ತಾಯಿಸುತ್ತದೆ.
3) ಎಲ್ಲ ಪಕ್ಷದ ಸರ್ಕಾರಗಳು ಕಳಸಾ-ಬಂಡೂರಿ ನಾಲಾ ಯೋಜನೆಯ ಕೇವಲ ಶಂಕುಸ್ಥಾಪನೆ, ಅಡಿಗಲ್ಲು ಹಾಕಿವೆಯೇ ಹೊರತು ನಿಜವಾದ ಕಾಳಜಿಯಿಂದ ಯೋಜನೆ ಜಾರಿಗೆ ಬದ್ಧತೆ ಪ್ರದರ್ಶಿಸುತ್ತಿಲ್ಲ. ಸರ್ಕಾರ ಕೂಡಲೇ ಈ ಯೋಜನೆಗೆ ಸಂಬಂಧಪಟ್ಟ ಎಲ್ಲ ಅಡೆತಡೆಗಳನ್ನು ನಿವಾರಿಸಿ ಯೋಜನೆ ಜಾರಿಗೆ ತರಲು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಒತ್ತಾಯಿಸುತ್ತದೆ.
4) ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆದು ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕೆಂದು ಒತ್ತಾಯಿಸುತ್ತದೆ.
5) ಕೃಷಿ ಭೂಮಿ ವ್ಯವಸಾಯೋತ್ತರ ಚಟುವಟಿಕೆಗೆ ಕಬಳಿಕೆಯಾಗುತ್ತಿದ್ದು, ಇದನ್ನು ತಡೆಯಲು ಕೃಷಿಭೂಮಿ ರಕ್ಷಣೆ ಕಾಯ್ದೆ ಜಾರಿಗೆ ತರಬೇಕು.
6) ರೈತ ಕುಟುಂಬವನ್ನು ಒಂದು ಘಟಕವೆಂದು ಪರಿಗಣಿಸಿ ಕುಟುಂಬದ ಅವಶ್ಯಕತೆ ಹಾಗೂ ಅಭಿವೃದ್ಧಿಯನ್ನು ಮಾನದಂಡವಾಗಿ ಮಾಡಿಕೊಂಡು ವಿಶೇಷ ಪ್ಯಾಕೇಜ್ ಮೂಲಕ ಎಲ್ಲ ರೀತಿಯ ಸಾಲ ನೀಡಬೇಕು. ಕುರಿ, ಕೋಳಿ, ಎತ್ತಿನಗಾಡಿ ಸಾಲವನ್ನು ಹೆಚ್ಚಾಗಿ ನೀಡಬೇಕೆಂದು ನಿರ್ಣಯಕೈಗೊಳ್ಳಲಾಯಿತು.
7) ಖುಷ್ಕಿ ಪ್ರದೇಶ ಕೃಷಿ ನೀತಿ ಪ್ರದರ್ಶಿಸಬೇಕು. ಬೆಳೆವಿಮೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಮತ್ತು ವೈಜ್ಞಾನಿಕ ರೀತಿಯಲ್ಲಿ ಪರಿಹಾರ ವಿತರಣೆ ಮಾಡಬೇಕು.
8) ಅಂತರ್ಜಲ ಸಂರಕ್ಷಣೆ ಪ್ರಮುಖ ಆದ್ಯತಾ ವಲಯ ಎಂದು ಘೋಷಿಸಬೇಕು. ಮಳೆನೀರನ್ನು ಇಂಗಿಸುವಂತಹ ಕಾರ್ಯಕ್ಕೆ ಚಾಲನೆ ನೀಡಬೇಕು. ಕೆರೆಗಳ ದುರಸ್ತಿ ಮತ್ತು ಸಂರಕ್ಷಣೆ ನಿರಂತರವಾಗಿ ನಡೆಯಬೇಕು.
9) ರಾಜ್ಯದ ಕೆಲವು ಭಾಗಗಳಲ್ಲಿ ನೀರಿನ ಕೊರತೆಯಿಂದ ತೆಂಗಿನ ಮರಗಳು ಸಂಪೂರ್ಣವಾಗಿ ನಾಶವಾಗಿವೆ. ಆಲೂಗಡ್ಡೆ ಬೆಳೆಯೂ ನಷ್ಟವಾಗಿದೆ. ಇದಕ್ಕೆ ಸರ್ಕಾರ ವೈಜ್ಞಾನಿಕ ಪರಿಹಾರ ನೀಡಬೇಕು.
10) ಅತಿವೃಷ್ಟಿ-ಅನಾವೃಷ್ಟಿ, ಒಣಬರ, ಹಸಿಬರದಿಂದಾಗಿ ರೈತರು ಕೃಷಿಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ಮುಂದಾಲೋಚನಾ ಕ್ರಮ ಜಾರಿಗೊಳಿಸಬೇಕು. ಇದಕ್ಕಾಗಿ ಸರ್ಕಾರ ಉದ್ದೇಶಿಸಿರುವ ಉಪಶಮನ ನಿಧಿ ಸಾಲದು. ಈ ಕಾರಣಕ್ಕಾಗಿ ವ್ಯಾಟ್ಮಾದರಿ ತೆರಿಗೆ ಹಾಕಿ ಕನಿಷ್ಠ ರು. 15 ಸಾವಿರ ಕೋಟಿ ಬರಗಾಲ ನಿಧಿಗೆ ಕಾಯ್ದಿರಿಸಬೇಕು
11) ಕೃಷಿ ಪಂಪ್ಸೆಟ್ಗಳಿಗೆ ದಿನಕ್ಕೆ 10 ಗಂಟೆ 3 ಫೇಸ್ ವಿದ್ಯುತ್ ನೀಡಬೇಕು. ವಿದ್ಯುತ್ಗಾಗಿ ಹೋರಾಟ ಮಾಡಿ ಮನೆ ಮೀಟರ್ ಬಿಚ್ಚಿ ಚಳವಳಿ ನಡೆಸಿದ ಚಳವಳಿದಾರರ ಮೇಲೆ ಹೂಡಿರುವ ಎಲ್ಲಾ ಮೊಕದ್ದಮೆ ಕೂಡಲೇ ವಾಪಸ್ ಪಡೆದು ಮೀಟರ್ ಕಿತ್ತಿರುವ ಮನೆಯ ವಿದ್ಯುತ್ ಬಾಕಿ ಮನ್ನಾ ಮಾಡಿ ಹೊಸದಾಗಿ ಮೀಟರ್ ಹಾಕಿ ಬಿಲ್ ಮಾಡಬೇಕು.
12) ಕಬ್ಬು ಬೆಳೆಗಾರರ ರಕ್ಷಣೆಗಾಗಿ ಕೆಎಸ್ಡಿಎಫ್ ಸ್ಥಾಪನೆ ಮಾಡಬೇಕು ಮತ್ತು ಎಸ್ಎಸ್ಎಪಿ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಬೇಕು.
13) ಸೋಲಾರ್ ವಿದ್ಯುತ್ ಪಂಪ್ಸೆಟ್ ಅಳವಡಿಸಿಕೊಳ್ಳುವ ರೈತರಿಗೆ ನೂರಕ್ಕೆ ನೂರುಭಾಗ ಸಹಾಯಧನ ನೀಡಬೇಕು.
14) ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಉಚಿತ ಚಿಕಿತ್ಸೆ ನೀಡಲು ಹೆಲ್ತ್ಕಾರ್ಡ್ ನೀಡಬೇಕು.
15) ಪ್ರತಿವರ್ಷ ಗ್ರಾಮ ಪಂಚಾಯ್ತಿಗೆ ರು. 2 ಕೋಟಿ ನೀಡುವ ಮೂಲಕ ನಿಜವಾದ ವಿಕೇಂದ್ರೀಕರಣಕ್ಕೆ ಒತ್ತು ನೀಡಿ ಗ್ರಾಮ ಸರ್ಕಾರವನ್ನು ಸ್ಥಾಪನೆ ಮಾಡಿ ಈ ಮೂಲಕ ಗ್ರಾಮೀಣ ಭಾಗದ ಮೂಲ ಸಮಸ್ಯೆ ಪರಿಹರಿಸಬೇಕು. ಬೀಜೋತ್ಪಾದನೆ, ಆರೋಗ್ಯ ರಕ್ಷಣೆಯ ಹೊಣೆಗಾರಿಕೆಯನ್ನು ಗ್ರಾಮ ಪಂಚಾಯ್ತಿಗೆ ನೀಡಬೇಕು.
16) ಬಳ್ಳಾರಿ, ಗದಗ ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರಿಗೆ ನೀಡಬೇಕು. ಈ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ಕೈ ಬಿಡಬೇಕು.
17) ಹುಲಿಗುಡ್ಡ ಏತನೀರಾವರಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಸಮಾವೇಶವು ಒತ್ತಾಯಿಸುತ್ತದೆ.
18) ಎನ್ಎಂಬಿಸಿ ಕಂಪನಿಯಿಂದ ರೈತರಿಗೆ ಆಗುವ ಒಂದು ಕೋಟಿ ಇಪ್ಪತ್ತೇಳು ಲಕ್ಷ ರು.ಗಳ ಬೆಳೆ ಪರಿಹಾರವನ್ನು ಬೇಗನೇ ಪಾವತಿಸಲು ಕ್ರಮಕೈಗೊಳ್ಳಬೇಕು.
19) ಪೋಸ್ಕೋ ಯೋಜನೆಗಾಗಿ ಕೆಐಡಿಬಿ ವಶಪಡಿಸಿಕೊಂಡಂತಹ ಜಮೀನುಗಳನ್ನು ಆ ರೈತರಿಗೆ ಮರಳಿ ಕೊಡಬೇಕೆಂದು ಸರ್ಕಾರಕ್ಕೆ ಈ ಸಮಾವೇಶದ ಮೂಲಕ ಒತ್ತಾಯಿಸುತ್ತದೆ.
ಈ ಎಲ್ಲ ನಿರ್ಣಯಗಳನ್ನು ಕೆ.ಎಸ್. ಪುಟ್ಟಣ್ಣಯ್ಯ, ಚಾಮರಸ್ ಮಾಲೀಪಾಟೀಲ, ಎಂ.ಬಿ. ಸಂಕನಗೌಡರ, ಬಡಗಲು ಪುರ ನಾಗೇಂದ್ರ, ಸೋಮುಗುದ್ದು ರಂಗಸ್ವಾಮಿ, ಕೆ.ಜಿ. ಶಾಂತಸ್ವಾಮಿಮಠ, ಕೆ.ಬಿ. ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ, ಬಿ.ಸಿ. ಪಾಟೀಲ ಸೇರಿದಂತೆ ರೈತ ಸಂಘದ ಹಲವಾರು ಹಿರಿಯರು ಸಾವಿರಾರು ಸಂಖ್ಯೆಯ ರೈತರ ಸಮಕ್ಷಮದಲ್ಲಿ ತೆಗೆದುಕೊಂಡರು.