ಮಳೆಗಾಗಿ ಮುಸ್ಲಿಮರ ಪ್ರಾರ್ಥನೆ
ವಿಶೇಷ ವರದಿ
ಗದಗ: ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೇ ಇರುವುದರಿಂದ ರೈತರು ಸಂಕಷ್ಟದಲ್ಲಿದ್ದು, ಮಳೆಯಾಗಲೆಂದು ಗದಗ-ಬೆಟಗೇರಿ ಅವಳಿ ನಗರದ ಮುಸ್ಲಿಂ ಬಾಂಧವರು ಸೋಮವಾರ ನಗರದ ಎಪಿಎಂಸಿ ಯಾರ್ಡ್ನಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ವಿಶೇಷ ಪ್ರಾರ್ಥನೆ (ನಮಾಜ್) ಸಲ್ಲಿಸಿದರು.
ಹಲವು ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೇ ಇರುವುದರಿಂದ ರೈತರು ತಲೆ ಮೇಲೆ ಕೈಹೊತ್ತು ಕೂಡುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಾದ್ಯಂತ ರೈತರು ತಮ್ಮ ಭೂಮಿಯಲ್ಲಿ ಹೆಸರು, ಶೇಂಗಾ ಸೇರಿದಂತೆ ಇನ್ನಿತರೆ ಬೀಜ ಬಿತ್ತನೆ ಮಾಡಿದ್ದು, ಈಗ ಸಮರ್ಪಕ ಮಳೆಯ ಕೊರತೆಯಿಂದ ಬೆಳೆಗಳೆಲ್ಲ ಬಾಡಿಹೋಗುವ ಆತಂಕವು ರೈತರಲ್ಲಿ ಮನೆಮಾಡಿದೆ. 15-20 ದಿನಗಳಿಂದ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಕಂಡುಬರುತ್ತಿದೆ. ಆದರೆ ಮೋಡವು ಕರಗಿ ಬೀಳದೆ ಬೇರೆಡೆ ಹೋಗುತ್ತಿರುವುದು ರೈತರಲ್ಲಿ ನೋವುಂಟು ಮಾಡಿದೆ.
ಬಿತ್ತಿದ ಖರ್ಚು ಬಾರದ ಸ್ಥಿತಿ: ಮಳೆಗಾಗಿ ಈಗಾಗಲೇ ರೈತರು ಮಾಡದೇ ಇರುವ ಪೂಜೆಗಳಿಲ್ಲ. ಹರಕೆ ಸಲ್ಲಿಸದ ದೇವರುಗಳಿಲ್ಲ. ಇಷ್ಟಾದರೂ ಮಳೆರಾಯ ಕೃಪೆ ತೋರದೇ ಇರುವುದರಿಂದ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ರೈತರ ಬೆಳೆಯು ಸಂಪೂರ್ಣ ಬಾಡಿ, ಬಿತ್ತಿದ ಬೀಜದ ಬೆಲೆಯೂ ರೈತರಿಗೆ ಸಿಗದಂತಹ ಸ್ಥಿತಿ ಎದುರಾಗಲಿದೆ.
ರೈತರು ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ದೇವರಿಗೆ ವಿಶೇಷ ಅಭಿಷೇಕ, ಅಹೋರಾತ್ರಿ ಭಜನೆ, ಭೂಮಾತೆಗೆ ಹಾಲುಣಿಸುವ ಕಾರ್ಯಕ್ರಮ ಸೇರಿದಂತೆ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಜಿಲ್ಲೆಯಲ್ಲಿ ಸಮರ್ಪಕ ಮಳೆಮಾತ್ರ ಆಗುತ್ತಿಲ್ಲ. ಇನ್ನಾದರೂ ಮಳೆಯಾಗಲಿ ಎಂಬ ಆಶಾಭಾವನೆಯಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿನ ಮುಸ್ಲಿಂ ಬಾಂಧವರು ನಗರದ ಎಪಿಎಂಸಿ ಯಾರ್ಡ್ನ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಮಳೆರಾಯನಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬೆಳೆಗೆ ರೋಗ: ಹಲವು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದಿಂದ ಗಾಳಿ ಪ್ರಾರಂಭವಾಗಿದ್ದು, ಇದರಿಂದಾಗಿ ಹೊಲಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆದಿರುವ ಬೆಳೆಗಳಿಗೆ ವಿವಿಧ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಎಲ್ಲ ಜನಾಂಗದವರೂ ವಿವಿಧ ರೀತಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರಂತೆಯೇ ಮುಸ್ಲಿಂ ಬಾಂಧವರು ಸೋಮವಾರ ರಮಜಾನ್ ತಿಂಗಳಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಾಜಿಗಳಾದ ಮೌಲಾನಾ ಶಮಸುದ್ದೀನಸಾಬ ಅಣ್ಣಿಗೇರಿ, ಜಕರಿಯಾಸಾಬ್ ಖಾಜಿ, ಮುಫ್ತಿ ಅಬ್ದುಲ್ಸಮದಸಾಬ ಜಕಾತಿ, ಮೌಲಾನಾ ಮಹ್ಮದಅಲಿಸಾಬ, ಇಬ್ರಾಹಿಂಸಾಬ ಸದರಬಾಯಿ, ಹಾಫಿಜ ಇಬ್ರಾಹಿಂ, ರಿಯಾಜ ಬ್ಯಾಳಗಟ್ಟಿ, ಉಮರಫಾರೂಕ್ ಹುಬ್ಬಳ್ಳಿ, ಹಾಫಿಜ ಅಹ್ಮದ ನದಾಫ, ಮೌಲಾನಾ ಅಸ್ಸಾವುಲ್ಲಾ ಶಾಹಿರ, ಅಶ್ರಫ ಹುಬ್ಬಳ್ಳಿ, ಅನ್ವರ ಶಿರಹಟ್ಟಿ, ಜಿ.ಎಂ. ದಂಡಿನ, ಶರೀಫ ಮುಜಾವರ, ಗೌಸ ಮುಲ್ಲಾ, ಸರು ಬಳ್ಳಾರಿ, ರಜಾಕ ಶಿರಹಟ್ಟಿ, ಶಫಿ ಶಿರಹಟ್ಟಿ, ರಫೀಕ ಅಬ್ಬಿಗೇರಿ, ಸಲೀಂ ಬಳ್ಳಾರಿ, ಇಸ್ಮಾಯಿಲ್ ಹುಬ್ಬಳ್ಳಿ, ರಫೀಕ ಮುಲ್ಲಾ ಸೇರಿದಂತೆ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.