ಮೂಲ ಸೌಲಭ್ಯಕ್ಕೆ ಆಗ್ರಹ: ಮನವಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 22
ಶಿರಹಟ್ಟಿ ಪಪಂ ವ್ಯಾಪ್ತಿಯ ವಾರ್ಡ್ ನಂ. 1ರ ಖಾನಾಪುರ ಗ್ರಾಮದಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಜನತೆ ನಿತ್ಯ ಪರದಾಡುತ್ತಿದ್ದು, ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿ ಸುರೇಶ ಅಕ್ಕಿ ನೇತೃತ್ವದಲ್ಲಿ ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ ಅಕ್ಕಿ ಮಾತನಾಡಿ, 5-6 ತಿಂಗಳುಗಳಿಂದ ಗ್ರಾಮದಲ್ಲಿ ಬೀದಿ ದೀಪ ಹತ್ತುತ್ತಿಲ್ಲ. ವಿದ್ಯುತ್ ಇಲ್ಲದೇ ಕತ್ತಲಲ್ಲಿಯೇ ಕಾಲ ಕಳೆಯುತ್ತಿದ್ದು, ಅನೇಕ ಬಾರಿ ಪಪಂ ಅಧಿಕಾರಿಗಳಿಗೆ ತಿಳಿಸಿದ್ದಲ್ಲದೇ ಖುದ್ದಾಗಿ ಗ್ರಾಮಕ್ಕೆ ಕರೆದುಕೊಂಡು ಬಂದು ವಸ್ತುಸ್ಥಿತಿ ತೋರಿಸಿದರೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಮುಂದಾಗಿಲ್ಲ. ಗ್ರಾಮದಲ್ಲಿ 2 ಸಾರ್ವಜನಿಕ ಶೌಚಾಲಯಗಳಿದ್ದು, ಸ್ವಚ್ಛತೆಯಿಲ್ಲದೆ ಗಬ್ಬೆದ್ದು ನಾರುತ್ತಿವೆ. ಸದ್ಯ ಬಳಕೆಗೆ ಬಾರದೇ ಮಹಿಳೆಯರು ಬಹಿರ್ದೆಸೆಗೆ ಬಯಲು ಜಾಗವನ್ನೇ ಅವಲಂಬಿಸಬೇಕಾಗಿದೆ.
ಇತ್ತೀಚೆಗೆ ಗ್ರಾಮದಲ್ಲಿ ನಿರ್ಮಿಸಿದ ಗಟಾರ ಹಾಗೂ ಸಿ.ಸಿ. ರಸ್ತೆಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಗಟಾರದಲ್ಲಿ ಗಲೀಜು ನೀರು ನಿಂತು ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ, ಜನತೆ ಕಾಯಿಲೆಗೆ ತುತ್ತಾಗಿ ನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಗ್ರಾಮದ ತುಂಬೆಲ್ಲ ಎಲ್ಲೆಂದರಲ್ಲಿ ಗಲೀಜು ತುಂಬಿದ್ದು, ಪಪಂನವರು ಮಾತ್ರ ಸ್ವಚ್ಛತೆಗೆ ಮುಂದಾಗಿಲ್ಲ ಎಂದು ಆರೋಪಿಸಿದರು.ಗ್ರಾಮದಲ್ಲಿ ಇನ್ನೂ ಅನೇಕ ಸಮಸ್ಯೆಗಳಿದ್ದು, ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ. ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಮುಖ್ಯಾಧಿಕಾರಿ ಡಿ.ಟಿ. ದೊಡ್ಡಮನಿ ಅವರಿಗೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದು, ಸದ್ಯ ಯಾವುದೇ ಅನುದಾನವಿಲ್ಲ. ಅನುದಾನ ಬಂದ ನಂತರ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸುವುದಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸುರೇಶ ಅಕ್ಕಿ ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಜಿಲ್ಲಾಧಿಕಾರಿಗಳು ಖುದ್ದಾಗಿ ಖಾನಾಪುರ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಸಮಸ್ಯೆ ಕುರಿತು ಪರಿಶೀಲನೆ ನಡೆಸಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವಿಳಂಬ ನೀತಿ ಕಂಡುಬಂದರೆ ಗ್ರಾಮಸ್ಥರೆಲ್ಲರೂ ಸೇರಿ ಸೌಲಭ್ಯಕ್ಕಾಗಿ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಹುಸೇನಸಾಬ, ಮಾಬೂಸಾಬ ತಹಸೀಲ್ದಾರ್, ಎಚ್. ಯಲ್ಲಪ್ಪ, ಎಂ.ವಿ. ಚಳಗೇರಿ, ಶರಣಪ್ಪ ಕರಮುಡಿ, ಪಾರವ್ವ ಬೆಂತೂರ, ಮಲ್ಲೇಶ ಕರಮುಡಿ ಇದ್ದರು.