ವ್ಯಾಪಾರಸ್ಥರ ಸಮಸ್ಯೆ ನೀಗಿಸಿ
ಗದಗ: ವ್ಯಾಪಾರಸ್ಥರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಧಾರವಾಡ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಡೆದ ವಿಭಾಗೀಯ ಮಟ್ಟದ ತೆರಿಗೆ ಸಲಹಾ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಜಂಟಿ ಆಯುಕ್ತ ಬಿ.ಎ.ನಾಣಿಯ್ಯಪ್ಪ, ವಾಣಿಜ್ಯ ತೆರಿಗೆ ಇಲಾಖೆಯ ಗುಪ್ತ ವಾರ್ತೆಯ ಜಂಟಿ ಆಯುಕ್ತ ಎಂ.ಜಿ. ಹಿರೇಮಠ ಹಾಗೂ ಗಿರಿಮಲ್ಲಪ್ಪ ಭರವಸೆ ನೀಡಿದರು.
ಅವರು ಈಚೆಗೆ ಗದಗ ವಾಣಿಜ್ಯೋಧ್ಯಮ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ಇವರ ನಿಯೋಗದೊಂದಿಗೆ ಧಾರವಾಡ ವಾಣಿಜ್ಯ ತೆರಿಗೆ ಇಲಾಖೆಯ ಸಭಾಭವನದಲ್ಲಿ ನಡೆದ ಸಭೆಯಲ್ಲಿ ವ್ಯಾಪಾರಸ್ಥರು ಎದುರಿಸುತ್ತಿರುವಂತಹ ಅನೇಕ ಸಮಸ್ಯೆಗಳನ್ನು ಜಂಟಿ ಆಯುಕ್ತರ ಗಮನಕ್ಕೆ ತಂದು, ಇವುಗಳಿಗೆ ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡಬೇಕೆಂದು ಮನವಿ ಮಾಡಲಾಯಿತು. ಈ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು.
ಮೌಲ್ಯವರ್ಧಿತ ತೆರಿಗೆಯಲ್ಲಿ ರಿಟರ್ನ್ ಹಾಕಿದ ನಂತರ 35 ದಿನದಲ್ಲಿ ರಿಫಂಡ್ನ್ನು ಕೊಡಬೇಕಾಗುತ್ತದೆ. ತಡವಾದರೆ ಬಡ್ಡಿ ಸಮೇತ ರಿಫಂಡ್ ಕೊಡಬೇಕು. ಈ ಕಾಯ್ದೆಯನ್ನು ಜಾರಿಗೆ ತಂದಿರುವುದಿಲ್ಲ. ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆ 2003ರ ಅಡಿಯಲ್ಲಿ ಹಲವಾರು ಪ್ರಕರಣಗಳಲ್ಲಿ ಕರ ನಿರ್ಧರಣೆ ಹಾಗೂ ಮನವಿ ಆದೇಶದ ಅನ್ವಯ ವರ್ತಕರಿಗೆ ನೀಡಬೇಕಾದ ಮರುಪಾವತಿ ಮೊತ್ತವನ್ನು ಇದುವರೆಗೂ ನೀಡಿರುವುದಿಲ್ಲ. ಮಾಸಿಕ ನಮೂನೆಯಲ್ಲಿ ಕೋರಿದ ಮರುಪಾವತಿ ಮೊತ್ತವನ್ನು 35 ದಿನಗಳ ಒಳಗಾಗಿ ವರ್ತಕರಿಗೆ ನೀಡಲಾಗುತ್ತಿಲ್ಲ. ಕಾರಣ ಮಾಸಿಕ ನಮೂನೆಯಲ್ಲಿ ಕೋರಿದ ಮರುಪಾವತಿ ಮೊತ್ತವನ್ನು 35 ದಿನಗಳ ಒಳಗಾಗಿ ವರ್ತಕರಿಗೆ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಉಳಿತಾಯ ಪತ್ರ (ಎನ್.ಎಸ್.ಸಿ) ಅವಧಿ ಮುಗಿದಿದ್ದರೂ ಸಹಿತ ಅವುಗಳನ್ನು ವ್ಯಾಪಾರಸ್ಥರಿಗೆ ಮರಳಿ ನೀಡಿಲ್ಲ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಇವುಗಳಲ್ಲದೇ ವ್ಯಾಪಾರಸ್ಥರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ತೆರಿಗೆ ಉಪಸಮಿತಿಯ ಚೇರ್ಮನ್ ವಿ.ಎಸ್. ಮಾಟಲದಿನ್ನಿ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್.ಕೆ. ಕುರಡಗಿ, ಸಿದ್ದಣ್ಣ ಗೌರಿಪುರ, ಎಸ್.ಎಸ್. ರಡ್ಡೇರ, ಸಂಸ್ಥೆಯ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಸುರಕೋಡ ಮುಂತಾದವರು ಉಪಸ್ಥಿತರಿದ್ದರು.