ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಜೇಂದ್ರಗಡಕ್ಕೆ ಟ್ರಾಫಿಕ್ ಸಿಗ್ನಲ್ ಭಾಗ್ಯ

Mainashree
Updated On : 24 Jul 2013, 12:39 pm

ವಿಶೇಷ ವರದಿ
ಗಜೇಂದ್ರಗಡ: ಗದಗ ಜಿಲ್ಲೆಯ ಮುಖ್ಯ ವಾಣಿಜ್ಯ ನಗರ ಖ್ಯಾತಿಗೆ ಹೆಸರಾದ ಗಜೇಂದ್ರಗಡ ಪಟ್ಟಣದಲ್ಲಿನ ಹೃದಯ ಭಾಗ ಕಾಲಕಾಲೇಶ್ವರ ವೃತ್ತದಲ್ಲೀಗ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಕಾರ್ಯ ಭರದಿಂದ ಪ್ರಾರಂಭಿಸಲಾಗಿದೆ.
ಸದಾ ಜನದಟ್ಟಣೆ ಜತೆಗೆ ಎಲ್ಲೆಂದರಲ್ಲಿ ನಿಂತ ವಾಹನಗಳು, ಜನ ಸಾಮಾನ್ಯರ ಸಂಚಾರಕ್ಕೆ ತೀವ್ರ ತೊಂದರೆಯಾಗಿ ಪದೇ ಪದೇ ಅಪಘಾತಗಳಿಗೆ ಹೇಳಿ ಮಾಡಿಸಿದ ತಾಣವಾಗಿದ್ದ ಈ ಸ್ಥಳದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಯಿಂದ ಜನತೆಯ ನೆಮ್ಮದಿಯ ಸಂಚಾರಕ್ಕೆ ಅನುಕೂಲವಾಗಲಿದೆ.
ಕೇವಲ ದೊಡ್ಡ ನಗರಗಳ ವ್ಯಾಪ್ತಿಯಲ್ಲಿ ಕಾಣುತ್ತಿದ್ದ ಟ್ರಾಫಿಕ್ ಸಿಗ್ನಲ್ ದೀಪಗಳನ್ನು ಗಜೇಂದ್ರಗಡದಲ್ಲಿ ಅಳವಡಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಪಟ್ಟಣದಲ್ಲಿ ಜನಸಂಖ್ಯೆ ಬೆಳೆದಂತೆ ಸಾರಿಗೆ ಸೌಕರ್ಯ ಕೊರತೆ ಎದುರಾಗಿದೆ. ಹೀಗಾಗಿ ಖಾಸಗಿ ವಾಹನಗಳ ದಟ್ಟಣೆ ಮಿತಿಮೀರಿದೆ. ಸಂಚಾರಿ ನಿಯಮ ಗಾಳಿಗೆ ತೂರಿದ ಪರಿಣಾಮ ಸಂಚಾರಿ ವ್ಯವಸ್ಥೆ ಹದಗೆಟ್ಟಿದೆ. ಇದನ್ನು ಅರಿತಿರುವ ಪೊಲೀಸ್ ಇಲಾಖೆ ಕಾಲಕಾಲೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಮುಂದಾಗಿದೆ.
ಪಟ್ಟಣದ ಮುಖ್ಯ ಜನನಿಬಿಡ ಪ್ರದೇಶವಾದ ಕಾಲಕಾಲೇಶ್ವರ ವೃತ್ತದಿಂದ ರೋಣ ರಸ್ತೆ, ಕುಷ್ಟಗಿ ರಸ್ತೆ ಹಾಗೂ ಬಸ್‌ನಿಲ್ದಾಣವರೆಗೆ ಸೂಚಿಸುವ ಟ್ರಾಫಿಕ್ ಸಿಗ್ನಲ್ ಕೆಲಸ ಮಾಡಲಿವೆ. ಇದರಿಂದ ರಸ್ತೆಗಳಲ್ಲಿ ಸಾರಿಗೆ ನಿಯಮ ಗಾಳಿಗೆ ತೂರಿ ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನಗಳಿಗೆ ಕಡಿವಾಣ ಬೀಳಲಿದೆ. ಇದರಿಂದ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ.
ಸಿಸಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ:  ಕಾಲಕಾಲೇಶ್ವರ ವೃತ್ತದಲ್ಲಿ ಪೊಲೀಸ್ ಇಲಾಖೆ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಜತೆಗೆ ಸಿಸಿ ಕ್ಯಾಮೆರಾ ಕೂಡ್ರಿಸಲು ಪುರಸಭೆಗೆ ಹಣಕಾಸಿನ ನೆರವು ನೀಡಲು ಪೊಲೀಸ್ ಇಲಾಖೆ ವಿನಂತಿಸಿದೆ. ಈ ಬೇಡಿಕೆ ಈಡೇರಿಸಲು ಪುರಸಭೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಅಪರಾಧ ಪತ್ತೆ ಹಚ್ಚಲು ಇನ್ನೂ ಹೆಚ್ಚಿನ ಅನುಕೂಲವಾಗಲಿದೆ.
ಗದಗ ನಗರ ಹೊರತುಪಡಿಸಿ ಗಜೇಂದ್ರಗಡದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಚಾಲನೆ ನೀಡಿರುವುದು ಜಿಲ್ಲೆಯಲ್ಲಿಯೇ ಮೊದಲನೆಯದಾಗಿದೆ. ಹಿಂದಿನ ಸರ್ಕಾರ ಗಜೇಂದ್ರಗಡ ತಾಲೂಕು ಕೇಂದ್ರ ಘೋಷಣೆ ಮಾಡಿದಾಗ ಈ ಯೋಜನೆ ರೂಪಿಸಲಾಗಿದೆ. ಬಳಿಕ ಚುನಾವಣೆ ನೀತಿ ಸಂಹಿತೆಯಿಂದ ತಡವಾಯಿತು. ಗಜೇಂದ್ರಗಡದಲ್ಲಿ ಜನಸಂದಣಿ ಮತ್ತು ವಾಹನ ದಟ್ಟಣೆಯಿಂದ ಹೆಚ್ಚುತ್ತಿರುವ ಅಪಘಾತ ತಪ್ಪಿಸುವುದು ಮತ್ತು ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಅಗತ್ಯತೆ ಹಿನ್ನೆಲೆಯಿಂದ ಪೊಲೀಸ್ ಇಲಾಖೆ ಸ್ಥಾಪಿತ ಹೊಸ ಟ್ರಾಫಿಕ್ ಸಿಗ್ನಲ್‌ನ್ನು ಸಾರ್ವಜನಿಕರು ಸದ್ವಿನಿಯೋಗ ಪಡಿಸಿಕೊಳ್ಳಬೇಕು.
ಟ ಡಾ. ಎಸ್.ಡಿ. ಶರಣಪ್ಪ  
ಗದಗ ಎಸ್ಪಿ

ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್‌ಗೆ ಸಿಸಿ ಕ್ಯಾಮೆರಾ ಅಳವಡಿಸಲು ರೋಣ ಸಿಪಿಐ ಅವರು ಮಾತನಾಡಿದ್ದಾರೆಯೇ ಹೊರತು ನಾವು ಕೇಳಿದ ಲಿಖಿತ ಮನವಿ ಕೊಟ್ಟಿಲ್ಲ. ದಾಖಲೆ ಸಮೇತ ಕೋರಿದರೆ ಆಡಳಿತಾಧಿಕಾರಿಗಳಿಗೆ ತಿಳಿಸಿ ಸಿಸಿ ಕ್ಯಾಮೆರಾ ಅಳವಡಿಸಲು ಮನವರಿಕೆ ಮಾಡಿಕೊಡಲಾಗುವುದು.
ಟ ಮಹಾಂತೇಶ ಬೀಳಗಿ
(ಪುರಸಭೆ ಮುಖ್ಯಾಧಿಕಾರಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement