ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತರ ಸಂಕಷ್ಟಕ್ಕೆ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ

Mainashree
Updated On : 24 Jul 2013, 12:39 pm

ನರಗುಂದ: ಜಗತ್ತಿನಲ್ಲಿ ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಇಂತಹ ದೇಶದ ರೈತ ಸಮುದಾಯವು ಹಲವಾರು ಸಮಸ್ಯೆಗೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದರೂ ಕೂಡ ಯಾವು ಸರ್ಕಾರಗಳು ಇತ್ತ ಲಕ್ಷ್ಯವಹಿಸದೇ ಇರುವುದು ನೋವಿನ ಸಂಗತಿ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಹೇಳಿದರು.
ಈಚೆಗೆ ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆಯಿಂದ ಏರ್ಪಡಿಸಿದ್ದ 216ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ದೇಶದಲ್ಲಿ ನಿಸ್ವಾರ್ಥ, ನಿರಹಂಕಾರ, ಯಾವುದೇ ಫಲಾಪೇಕ್ಷೆ ಇಲ್ಲದೆ ಕಾಯ, ವಾಚಾ, ಮನಸಾ, ಸೇವೆ ಮಾಡವರು ಇಬ್ಬರೆ, ಒಬ್ಬ ಇಡೀ ಜಗತ್ತಿಗೆ ಮಳೆ ಬಿಸಿಲು ಲೆಕ್ಕಿಸದೆ ಹಗಲಿರುಳು ಭೂಮಿಯಲ್ಲಿ ದುಡಿದು ಅನ್ನ ಕೊಡುವ ಅನ್ನದಾತ, ಇನ್ನೊಬ್ಬ ದೇಶದ ಗಡಿ ಕಾಯುವ ಸೈನಿಕ ಇವರಿಬ್ಬರೂ ಪೂಜ್ಯನೀಯರು.  
1980 ಜುಲೈ 21ರ ನರಗುಂದ ರೈತ ಬಂಡಾಯದಲ್ಲಿ ಹುತಾತ್ಮರಾದ ಚಿಕ್ಕನರಗುಂದ ಯುವ ರೈತ ಈರಪ್ಪ ಕಡ್ಲಿಕೊಪ್ಪ ಮಡಿದು 33 ವರ್ಷ ಗತಿಸಿದರೂ ಈ ಭಾಗದ ರೈತರ ಮೂಲ ಸಮಸ್ಯೆಗಳು ಇಂದಿಗೂ ಪರಿಹಾರವಾಗಿಲ್ಲ. ಇದಕ್ಕೆಲ್ಲ ಮೂಲ ಕಾರಣವೆಂದರೆ ಹಲವಾರು ವರ್ಷಗಳಿಂದ ಕೇಂದ್ರದಲ್ಲಿ ಮತ್ತು ರಾಜ್ಯವನ್ನಾಳಿದ ಪಕ್ಷಗಳಿಗೆ ರೈತರ ಮೇಲೆ ಕಾಳಜಿ ಇಲ್ಲದೇ ಇರುವುದು. ಇನ್ನು ಮುಂದಾದರೂ ರೈತರ ಏಳ್ಗೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು. ಆರೋಗ್ಯ ನಿರೀಕ್ಷಕ ಶಂಕ್ರಣ್ಣ ಅಂಗಡಿ ಉಪನ್ಯಾಸ ನೀಡಿದರು. ಹುತಾತ್ಮ ರೈತನ ಸಹೋದರ ಗೂಳಪ್ಪ ಕಡ್ಲಿಕೊಪ್ಪ ಹಾಗೂ ನಿವೃತ್ತ ಶಿಕ್ಷಕ ಎಸ್.ಬಿ. ಅರ್ಜುನಗಿಯವರನ್ನು ಸನ್ಮಾನಿಸಲಾಯಿತು.
ರಮೇಶ ಐನಾಪುರ ಸ್ವಾಗತಿಸಿದರು. ಭೀಮಣ್ಣ ಅಕ್ಕೇರಿ ನಿರೂಪಿಸಿದರು. ಮಹಾಂತೇಶ ಹಿರೇಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement